ಬೆಂಗಳೂರು: ನನ್ನ ವಿರುದ್ಧ ಮಾಡಲಾಗಿರುವ ರಾಸಲೀಲೆ ಸಿಡಿ ನೂರಕ್ಕೆ ನೂರರಷ್ಟು ನಕಲಿ. ಈ ಸಿಡಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು.
ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ನಿರಪರಾಧಿ, ಅಪರಾಧಿಯಲ್ಲ. ಇದು ನಾಲ್ಕು ತಿಂಗಳ ಹಿಂದೆ ಮಾಡಿರುವ ಸಿಡಿ. 26 ಗಂಟೆ ಮೊದಲೇ ಹೈಕಮಾಂಡ್ ಈ ಬಗ್ಗೆ ಮಾಹಿತಿ ನೀಡಿತ್ತು ಎಂದರು.
ಇದು ರಾಜಕೀಯ ಷಡ್ಯಂತರ:
ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡಿತೀದೆ. ನನ್ನನ್ನು ರಾಜಕೀಯವಾಗಿ ಮುಗಿಸಲು ನೂರಾರು ಕೋಟಿ ಖರ್ಚು ಮಾಡಿದ್ದಾರೆ. ಬೆಂಗಳೂರಿನ ಎರಡು ಕಡೆ ಷಡ್ಯಂತರ ಆಗಿದೆ. ಯಶವಂತಪುರದ 4, 5ನೇ ಮಹಡಿಯಲ್ಲಿ ಹಾಗೂ ಹುಳಿಮಾವು ಬಳಿ ಷಡ್ಯಂತರ ನಡೆದಿದೆ. ಷಡ್ಯಂತರ ಮಾಡಿದ್ದವರನ್ನು ಜೈಲಿಗೆ ಹಾಕಿಸದೆ ಬಿಡಲ್ಲ. ಅವರು ಎಷ್ಟೇ ಪ್ರಭಾವಿ ಆಗಿದ್ದರು ಬಿಡಲ್ಲ ಎಂದು ಗುಡುಗಿದ್ದಾರೆ.
ನಾನು ಬಹಳ ದುಃಖದಲ್ಲಿ ಇದ್ದೇನೆ. ಸ್ವಂತ ನಿರ್ಧಾರದಿಂದ ರಾಜೀನಾಮೆ ನೀಡಿದ್ದೇನೆ. ಯಾವುದೇ ತನಿಖೆಗೆ ಬದ್ಧವಾಗಿದ್ದೇನೆ. ನನ್ನ ಕುಟುಂಬದ ಮರ್ಯಾದೆ ಮುಖ್ಯವಾಗಿದೆ. ಅದನ್ನು ವಾಪಸ್ಸು ತರುವವರೆಗೂ ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದರು.
ಸಹೋದರರು, ಎಲ್ಲ ಪಕ್ಷದ ನಾಯಕರು, ಎಚ್.ಡಿ. ಕುಮಾರಸ್ವಾಮಿ ಕುಟುಂಬದವರು ನನ್ನ ಪರವಾಗಿದ್ದರು. ನನಗೆ ಮಾನಸಿಕವಾಗಿ ಧೈರ್ಯ ತುಂಬಿದ ಎಲ್ಲರಿಗೂ ಧನ್ಯವಾದಗಳು ಎಂದರು.