ಉಡುಪಿ: ರಾಸಲೀಲೆ ಸಿಡಿ ಪ್ರಕರಣದ ಹಿಂದೆ ಕಾಂಗ್ರೆಸ್ ಪಕ್ಷದ ಯಾವುದೇ ಕೈವಾಡ ಇಲ್ಲ. ತಮ್ಮ ತಪ್ಪನ್ನು ಮರೆಮಾಚಲು ಬಿಜೆಪಿ ಪಕ್ಷವು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ. ಅಶ್ಲೀಲ ಸಿಡಿ ಬಿಡುಗಡೆಯಿಂದ ರಾಜ್ಯದ ಜನತೆ ತಲೆ ತಗ್ಗಿಸುವ ವಾತಾವರಣ ನಿರ್ಮಾಣವಾಗಿದೆ. ಬಸವಣ್ಣ, ಕುವೆಂಪುರ ನಮ್ಮ ನಾಡಿನಲ್ಲಿ ಇಂತಹ ಮಂತ್ರಿಗಳಿರುವುದು ನಾಚಿಕೆಗೇಡು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಟೀಕಿಸಿದರು.
ಉಡುಪಿ ಕಾಂಗ್ರೆಸ್ ಭವನದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯ ಸರಕಾರ ಜನರಿಗೆ ಉತ್ತಮ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಮಂತ್ರಿಗಳ ಮಧ್ಯೆ ಹೊಂದಾಣಿಕೆ, ಸಮನ್ವಯತೆ ಇಲ್ಲವಾಗಿದೆ. ಇದೇ ರೀತಿಯ ಪ್ರಕರಣಗಳು ಮುಂದೆ ಬಯಲಿಗೆ ಬರಬಾರದು ಎಂಬುದಾಗಿ ಆರು ಮಂದಿ ಸಚಿವರು ಈಗಾಗಲೇ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಕುಂಬಳ ಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಂಡ ಸ್ಥಿತಿ ಈ ಆರು ಮಂದಿ ಸಚಿವರದ್ದಾಗಿದೆ ಎಂದು ಲೇವಡಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡ ಎಂ.ಎ.ಗಫೂರ್, ಮಂಗಳೂರು ಕಾರ್ಪೊರೇಟರ್ ನವೀನ್ ಡಿಸೋಜ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್, ಎನ್ಎಸ್ಯುಐ ಜಿಲ್ಲಾಧ್ಯಕ್ಷ ಸೌರಭ್ ಬಲ್ಲಾಳ್ ಉಪಸ್ಥಿತರಿದ್ದರು.