ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗಳು ಸಮೀಪಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಕಸಾಪಕ್ಕೆ ಹೊಸ ನೇತೃತ್ವದ ಅಗತ್ಯವಿದೆ ಎಂದು ಕಸಾಪ ಸಾಮಾನ್ಯ ಸದಸ್ಯ, ಸಾಮಾಜಿಕ ಕಾರ್ಯಕರ್ತ ಜಿ. ವಾಸುದೇವ ಭಟ್ ಪೆರಂಪಳ್ಳಿ ಅಭಿಪ್ರಾಯಪಟ್ಟಿದ್ದಾರೆ.
ಹಾಲಿ ಅಧ್ಯಕ್ಷರು ಮತ್ತು ಅವರ ತಂಡ ಎರಡು ಅವಧಿಯಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಆ ಬಗ್ಗೆ ಯಾವುದೇ ಸಂದೇಹವೇ ಇಲ್ಲ. ಆದರೆ ಯಾವುದೇ ಸಂಘ ಸಂಸ್ಥೆಯಲ್ಲಿ ಚಲನಶೀಲತೆ ಮತ್ತು ಹೊಸ ಚಿಂತನೆ, ಹೊಸ ಉತ್ಸಾಹ, ಹೊಸ ಯೋಚನೆಗಳು ನಿರಂತರವಾಗಿ ಮೂಡಿಬರಬೇಕು. ಆದ್ದರಿಂದ ಬದಲಾವಣೆಯ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.
ಶೀಘ್ರದಲ್ಲೇ ಕನ್ನಡ ಭವನ ನಿರ್ಮಾಣವಾಗಬೇಕು. ಕಸಾಪಕ್ಕೆ ಉಡುಪಿ ಜಿಲ್ಲೆಯಲ್ಲಿ ಕೇವಲ ಎರಡು ಸಾವಿರ ಆಸುಪಾಸಿನ ಆಜೀವ ಸದಸ್ಯರಿದ್ದಾರೆ. ಇದು ಯಾವ ಮಾತ್ರಕ್ಕೂ ಸಾಲದು. ಬಹಳ ದೊಡ್ಡ ಮಟ್ಟದಲ್ಲಿ ಜಿಲ್ಲೆಯಲ್ಲಿ ಮತ್ತು ಇಡೀ ರಾಜ್ಯದಲ್ಲಿ ಸದಸ್ಯತ್ವ ನೋಂದಣಿಯಾಗುವ ಮೂಲಕ ಪರಿಷತ್ ಗೆ ಸಮಸ್ತ ಕನ್ನಡಿಗರ ಸಹಭಾಗಿತ್ವ ದೊರೆಯಬೇಕು. ಈ ತನಕ ಎರಡು ಅವಧಿಗೆ ನೇತೃತ್ವ ವಹಿಸಿದ ನೀಲಾವರ ಸುರೇಂದ್ರ ಅಡಿಗರು ಕರಾವಳಿಯ ಪ್ರತಿನಿಧಿಯಾಗಿ ರಾಜ್ಯ ಸಮಿತಿಯ ಸದಸ್ಯರಾಗಲು ತುಂಬ ಸಮರ್ಥರಿದ್ದಾರೆ. ಈ ಬಗ್ಗೆ ರಾಜ್ಯ ಮುಖಂಡರು ಗಮನಿಸಬೇಕು ಎಂದು ತಿಳಿಸಿದ್ದಾರೆ.
ನಾನು ಆಕಾಂಕ್ಷಿ ಅಲ್ಲ:
ಬದಲಾವಣೆ ಆಗಬೇಕು ಎನ್ನುವುದರ ಅರ್ಥ, ನಾನು ಅಧ್ಯಕ್ಷ ಹುದ್ದೆಯ ಆಕಾಂಕ್ಷಿ ಎಂಬುವುದಲ್ಲ. ನಾನು ಯಾವುದೇ ಪದಾಧಿಕಾರಿ ಹುದ್ದೆಯ ಅಪೇಕ್ಷೆ ಪಟ್ಟವನಲ್ಲ. ಕನ್ನಡದ ಹಿತ ಚಿಂತಕನಾಗಿ ಅಭಿಪ್ರಾಯಪಟ್ಟಿದ್ದಾನೆ ಅಷ್ಟೇ. ಕನ್ನಡದ ಒಳಿತಿಗಾಗಿ ಹಂಬಲಿಸುವ ನಿಸ್ಪೃಹ ವ್ಯಕ್ತಿಗಳು ಮುಂದೆ ಬರಬೇಕು ಎಂದು ವಾಸುದೇವ ಭಟ್ ತಿಳಿಸಿದ್ದಾರೆ.