ಚಿಕ್ಕಬಳ್ಳಾಪುರ: ಶಿವಮೊಗ್ಗದಲ್ಲಿ ನಡೆದ ಜಿಲೆಟಿನ್ ಸ್ಫೋಟ ದುರಂತ ಪ್ರಕರಣ ಮಾಸುವ ಮುನ್ನವೇ ಮತ್ತೆ ರಾಜ್ಯದಲ್ಲಿ ಮತ್ತೊಂದು ಜಿಲೆಟಿನ್ ಸ್ಫೋಟ ಪ್ರಕರಣ ನಡೆದಿದ್ದು, ಸ್ಫೋಟದ ತೀವ್ರತೆಗೆ ಆರು ಮಂದಿ ಸ್ಥಳದಲ್ಲೇ ಅಸುನೀಗಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ ಹೋಬಳಿಯ ಹಿರೇನಾಗವೇಲಿ ಗ್ರಾಮದ ಬಳಿ ಕಲ್ಲು ಗಣಿಗಾರಿಕೆ ಕ್ವಾರಿಯಲ್ಲಿ ರಾತ್ರಿ 12.45ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಆರೋಗ್ಯ ಸಚಿವ ಸುಧಾಕರ್ ತವರು ಕ್ಷೇತ್ರದಲ್ಲಿ ಇಂತಹದೊಂದು ದುರಂತ ನಡೆದಿದ್ದು, ಸ್ಫೋಟದ ತೀವ್ರತೆಗೆ ಹತ್ತಾರು ಕಿ.ಮೀ ವರೆಗೂ ಭೂಮಿ ಕಂಪಿಸಿದೆ.
ಜಿಲೆಟಿನ್ ಕಡ್ಡಿಗಳನ್ನು ಸಾಗಿಸುವಾಗ ಬ್ಲಾಸ್ಟ್:
ರಾತ್ರಿ 12.45ರ ಸಮಯದಲ್ಲಿ ಸ್ಫೋಟ ಸಂಭವಿಸಿದೆ. ಭ್ರಮರವರ್ಷಿಣಿ ಕ್ವಾರಿ ಬ್ಲಾಸ್ಟಿಂಗ್ಗೆ ಅಕ್ರಮವಾಗಿ ಸ್ಫೋಟಕ ಸಂಗ್ರಹ ಮಾಡಲಾಗಿತ್ತು. ಪೊಲೀಸರು ದಾಳಿ ನಡೆಸಿದ್ದ ಹಿನ್ನೆಲೆ ಸ್ಫೋಟಕವನ್ನು ಅರಣ್ಯದಲ್ಲಿ ಬಚ್ಚಿಡಲಾಗಿತ್ತು. ಬಚ್ಚಿಟ್ಟಿದ್ದ ಸ್ಫೋಟಕ ಸಾಗಿಸಲು ತೆರಳಿದ್ದಾಗ ಘಟನೆ ನಡೆದಿದೆ ಎಂದು ಘಟನೆಯಲ್ಲಿ ಗಾಯಗೊಂಡು ಬದುಕುಳಿದಿರುವ ರಿಯಾಜ್ ಮಾಹಿತಿ ತಿಳಿಸಿದ್ದಾರೆ.
ರಾತ್ರಿ 12 ಗಂಟೆಗೆ ಟಾಟಾ ಏಸ್ ಹತ್ತಲು ಹೇಳಿದ್ದರು. ಆದ್ರೆ ಟಾಟಾ ಏಸ್ನಲ್ಲಿ ಏನಿತ್ತು ಎಂದು ನನಗೆ ಗೊತ್ತಿಲ್ಲ. ಬಾಕ್ಸ್, ಬ್ಯಾಗ್ಗಳನ್ನ ತೆಗೆದುಕೊಂಡು ಐವರು ಅರಣ್ಯದೊಳಗೆ ಹೋದ್ರು. ನಾನು ಗಾಡಿಯಲ್ಲಿ ಕುಳಿತಿದ್ದಾಗ ಸ್ಫೋಟ ಸಂಭವಿಸಿತು. ಅರಣ್ಯದೊಳಗೆ ಹೋದ 5 ಜನ ಏನಾದರೋ ಗೊತ್ತಿಲ್ಲ. ನನಗೆ ಸಂಪೂರ್ಣ ಸುಟ್ಟ ಹಾಗೂ ರಕ್ತದ ಗಾಯಗಳಾಗಿವೆ ಎಂದು ರಿಯಾಜ್ ಹೇಳಿದ್ದಾರೆ.
ಸ್ಫೋಟದಲ್ಲಿ ಮೃತಪಟ್ಟ ಆರು ಜನರ ಪೈಕಿ ನಾಲ್ವರ ಗುರುತು ಸಿಕ್ಕಿದ್ದು, ಆಪರೇಟರ್ಗಳಾದ ರಾಮು, ಗಂಗಾಧರ್, ಇಂಜಿನಿಯರ್ ಉಮಾಕಾಂತ್, ಸ್ಥಳೀಯ ರಾಮು ಎಂದು ಗುರುತು ಪತ್ತೆಯಾಗಿದೆ.
ಸ್ಫೋಟಕ ಜಪ್ತಿ:
ಬಿಜೆಪಿ ಮುಖಂಡ ಗುಡಿಬಂಡೆ ನಾಗರಾಜ್, ರಾಘವೇಂದ್ರ ರೆಡ್ಡಿ, ಗಂಗೋಜಿರಾವ್, ಶಿವಾರೆಡ್ಡಿ ಸೇರಿದಂತೆ ನಾಲ್ವರ ಒಡೆತನದ ಕ್ವಾರಿ ಇದು. ನಾಲ್ವರೂ ಭ್ರಮರ ವರ್ಷಿಣಿ ಹೆಸರಿನ ಕ್ವಾರಿ ಮಾಲೀಕರು. ಫೆಬ್ರವರಿ 7ರಂದು ಕ್ವಾರಿ ಮೇಲೆ ದಾಳಿ ನಡೆಸಿ ಅಕ್ರಮ ಸ್ಫೋಟಕ ಜಪ್ತಿ ಮಾಡಿ ಗುಡಿಬಂಡೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು ಎಂದು ಚಿಕ್ಕಬಳ್ಳಾಪುರ ಎಸ್ಪಿ ಮಿಥುನ್‌ಕುಮಾರ್ ಮಾಹಿತಿ ನೀಡಿದ್ದಾರೆ.