ಉಡುಪಿ: ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಪೂರ್ವಜರು ಅಂಬಲಪಾಡಿಯ ಸ್ವಗೃಹ ಈಶಾವಾಸ್ಯಮ್ ನಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಶಿಲಾವೃಂದಾವನವನ್ನು ಆಚಾರ್ಯರ ಕುಟುಂಬಸ್ಥರು ನವೀಕರಣಗೊಳಿಸಲು ಉದ್ದೇಶಿಸಿದ್ದು, ಈ ಪ್ರಯುಕ್ತ ಭಾನುವಾರ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿತು.
ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಶಿಲಾನ್ಯಾಸ ನೆರವೇರಿಸಿದರು. ನೂತನ ಗುಡಿ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನೆರವೇರಿ ನವೀಕೃತ ಗುಡಿಯಲ್ಲಿ ಪುನಃ ಪ್ರತಿಷ್ಠೆಗೊಳ್ಳುವ ವೃಂದಾವನದಲ್ಲಿ ಗುರುರಾಯರು ಸನ್ನಿಹಿತರಾಗಿದ್ದುಕೊಂಡು ನಮ್ಮೆಲ್ಲರನ್ನು ನಿರಂತರವಾಗಿ ಅನುಗ್ರಹಿಸಲಿ ಎಂದು ಸಂದೇಶ ನೀಡಿದರು.
ಜ್ಯೋತಿರ್ವಿದ್ವಾನ್ ಪಾವಂಜೆ ವಾಸುದೇವ ಭಟ್ಟರ ಮಾರ್ಗದರ್ಶನದಲ್ಲಿ ವಿದ್ವಾನ್ ವೇಣುಗೋಪಾಲಕೃಷ್ಣ ಸಾಮಗರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಗುಡಿ ನಿರ್ಮಾಣದ ಉಸ್ತುವಾರಿ, ಇಂಜಿನಿಯರ್ ರಮೇಶ್ ರಾವ್ ಬೀಡು ಉಪಸ್ಥಿತರಿದ್ದರು.
ಬನ್ನಂಜೆ ಆಚಾರ್ಯರ ಸುಪುತ್ರ ವಿನಯಭೂಷಣ ಆಚಾರ್ಯ ಮತ್ತು ರಮಾ ಆಚಾರ್ಯ ದಂಪತಿ ಸಂಕಲ್ಪ ನೆರವೇರಿಸಿ ಶ್ರೀಗಳ ಗುರುಪೂಜೆ ನೆರವೇರಿಸಿದರು.
ನೂತನ ಗುಡಿಯ ಮೇಲ್ಭಾಗದಲ್ಲಿ ಬನ್ನಂಜೆ ಆಚಾರ್ಯರ ಅಭಿಮಾನಿಗಳು ಮತ್ತು ಹಿತೈಷಿಗಳ ಅಪೇಕ್ಷೆಯಂತೆ ಬನ್ನಂಜೆಯವರ ಸಾಹಿತ್ಯ ಕೃತಿಗಳ ಅಧ್ಯಯನ ಮತ್ತು ಪ್ರವಚನ ಮಾಲಿಕೆಗಳ ಶ್ರವಣಕ್ಕೆ ಅನುಕೂಲವಾಗುವಂತೆ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.
ಈ ಮೂಲಕ ಪರಮಜ್ಞಾನಿಗಳಾದ ಗುರು ರಾಯರ ಸೇವೆ ಮತ್ತು ಆಚಾರ್ಯರ ಆಧ್ಯಾತ್ಮ ಮತ್ತು ಸಾಹಿತ್ಯ ಕೈಂಕರ್ಯಗಳೂ ನಿರಂತರವಾಗಿ ನಡೆಸುವ ಅವಕಾಶ ಲಭಿಸಲಿದೆ. ಬನ್ನಂಜೆಯವರಿಂದಲೇ ಸ್ಥಾಪನೆಗೊಂಡ ಈಶಾವಾಸ್ಯ ಪ್ರತಿಷ್ಠಾನದ ವತಿಯಿಂದಲೇ ಈ ನಿರ್ಮಾಣಗಳು ನಡೆಯಲಿವೆ ಎಂದು ಪ್ರತಿಷ್ಠಾನದ ವಿಶ್ವಸ್ಥರಾದ ಉದ್ಯಮಿ ಬಾಲಾಜಿ ರಾಘವೇಂದ್ರ ಆಚಾರ್ಯ ತಿಳಿಸಿದ್ದಾರೆ.
ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ಸಂಯೋಜಿಸಿ, ವಂದಿಸಿದರು.












