ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ರಕ್ತದಾನ ಶಿಬಿರಗಳು ನಿರಂತರವಾಗಿ ನಡೆಯುತ್ತಿದ್ದು, ಹಲವಾರು ಸಂಘಟನೆಗಳು ಈ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿವೆ. ರಕ್ತದಾನ ಮಾಡುವ ಯುವಜನತೆಯ ಸಾಮಾಜಿಕ ಚಿಂತನೆ ಅನುಕರಣೀಯವಾದುದು ಎಂದು ಉಡುಪಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಅಭಿಪ್ರಾಯಪಟ್ಟರು.
ಮಣಿಪಾಲದ ಡಾ. ಟಿಎಂಎ ಪೈ ಪಾಲಿಟೆಕ್ನಿಕ್ ನಲ್ಲಿ ಗುರುವಾರ ಅಭಯಹಸ್ತ ಹೆಲ್ಪ್ ಲೈನ್ ಉಡುಪಿ, ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ, ಲಯನ್ಸ್ ಕ್ಲಬ್ ಉಡುಪಿ ಚೇತನ, ರೋಟರಿ ಕ್ಲಬ್ ಉಡುಪಿ ರಾಯಲ್, ಡಾ. ಟಿಎಂಎ ಪೈ ಪಾಲಿಟೆಕ್ನಿಕ್ ಕಾಲೇಜು ಮತ್ತು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ನಗರಸಭೆಯ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ಮಾತನಾಡಿ, ರಕ್ತದಾನ ಮಾಡುವುದರಿಂದ ದೇಹಕ್ಕೆ ಬರುವ ಹಲವಾರು ಸಂಭವನೀಯ ಕಾಯಿಲೆಗಳಿಗೆ ತಡೆ ಒಡ್ಡಬಹುದು ಎಂದು ತಿಳಿಸಿದರು.
ಕಾಲೇಜಿನ ಶೈಕ್ಷಣಿಕ ಸಂಯೋಜಕ ಟಿ. ರಂಗ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಟಿ. ನರೇಂದ್ರ ಪೈ, ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ರಕ್ತನಿಧಿ ವಿಭಾಗ ಮುಖ್ಯಸ್ಥೆ ಡಾ. ಶಮಿ ಶಾಸ್ತ್ರಿ, ಸಹಕಾರ ಭಾರತಿ ಅಧ್ಯಕ್ಷ ದಿನೇಶ್ ಹೆಗ್ಡೆ ಆತ್ರಾಡಿ, ಲಯನ್ಸ್ ಅಧ್ಯಕ್ಷ ರತ್ನಾಕರ್ ಶೆಟ್ಟಿ ಆತ್ರಾಡಿ, ಈಶ್ವರನಗರ ರೆಸಿಡೆನ್ಶಿಯಲ್ ವೆಲ್ ಫೇರ್ ಅಸೋಸಿಯೇಷನ್ ಅಧ್ಯಕ್ಷ ಡಾ. ಸುರೇಶರಮಣ ಮಯ್ಯ, ಸ್ನೇಹಸಂಗಮ ಅಧ್ಯಕ್ಷ ಹರೀಶ್ ಜಿ. ಕಲ್ಮಾಡಿ, ವಾರ್ಡ್ ಸಮಿತಿ ಅಧ್ಯಕ್ಷ ಗಿರೀಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಯೋಜಕ ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ ಸ್ವಾಗತಿಸಿದರು. ಉಪಪ್ರಾಂಶುಪಾಲ ಡೆರಿಕ್ ಮಸ್ಕರೇನಸ್ ವಂದಿಸಿದರು. ರಕ್ತದ ಆಪತ್ಭಾಂದವ ಸತೀಶ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು.












