ಬೆಂಗಳೂರು: ಮರಳು ಗಣಿಗಾರಿಕೆಯ ನಿಯಮಗಳನ್ನು ಸರಳಗೊಳಿಸಲಾಗಿದೆ ಎಂದು ಗಣಿ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಬೆಂಗಳೂರಿನ ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, ಮರಳು ಸುಲಭವಾಗಿ ಸಿಗಲು 2021ರ ನೂತನ ಗಣಿ ನೀತಿಯನ್ನು ಜಾರಿಗೆ ತರಲು ಚಿಂತನೆ ನಡೆದಿದೆ ಎಂದು ಹೇಳಿದರು.
ಹಳ್ಳಕೊಳ್ಳಗಳಲ್ಲಿ ಸಿಗುವ ಮರಳನ್ನು ತರಲು ಕಡಿವಾಣ ಹಾಕಲಾಗಿತ್ತು. ಇದರಿಂದ ಸಣ್ಣ ರೈತರು, ಜನಸಾಮಾನ್ಯರಿಗೆ ಮರಳು ಸಿಗುತ್ತಿರಲಿಲ್ಲ. ಗ್ರಾಮೀಣ ಭಾಗದಲ್ಲಿ ಆಶ್ರಯ ಮನೆಗಳಿಗೂ ಮರಳಿನ ಸಮಸ್ಯೆ ಎದುರಾಗಿತ್ತು. ಆದರೆ ಈಗ ಹಳ್ಳಕೊಳ್ಳಗಳಲ್ಲಿ ಸಿಗುವ ಮರಳನ್ನು ಬಳಸಲು ಅವಕಾಶ ನೀಡುತ್ತೇವೆ. ಎತ್ತಿನಗಾಡಿ, ಟ್ರ್ಯಾಕ್ಟರ್ಗಳಲ್ಲಿ ಮರಳನ್ನು ತರಲು ಅವಕಾಶ ನಿಡುತ್ತೇವೆ ಎಂದರು.
ಉತ್ತರ ಕರ್ನಾಟಕ, ಕರಾವಳಿಯಲ್ಲಿ ಒಂದೊಂದು ನೀತಿ ಇವೆ. ಇದನ್ನೆಲ್ಲವನ್ನೂ ಬಗೆಹರಿಸುವ ಬಗ್ಗೆ ಹೊಸ ಮರಳು ನೀತಿಯನ್ನು ಜಾರಿಗೆ ತರುತ್ತೇವೆ. (Sand Mining new rules) ಸದ್ಯ ಈಗ ಮೂರು ಕಮಿಟಿಗಳನ್ನು ರಚನೆ ಮಾಡಿದ್ದೇವೆ. ಆಂಧ್ರಪ್ರದೇಶಕ್ಕೆ ಇಂದು ಒಂದು ಕಮಿಟಿ ಹೋಗಿದೆ. ಅಲ್ಲಿನ ನೀತಿಯ ಬಗ್ಗೆ ಅಧ್ಯಯನ ಮಾಡಿ ನಂತರ ಅಲ್ಲಿನ ನೀತಿಯ ಬಗ್ಗೆ ವರದಿಯನ್ನು ನೀಡಲಿದೆ ಎಂದರು. ಸುಲಭವಾಗಿ ಎಲ್ಲರಿಗೂ ಮರಳು ಸಿಗಬೇಕು. ಇದರಿಂದ ನೈಸರ್ಗಿಕವಾಗಿಯೂ ಅಪಾಯ ಆಗಬಾರದು. ಮರಳು, ಮಣ್ಣು, ಗರಸು ಎಂದು ವಿಭಾಗಿಸುತ್ತೇವೆ. ಮರಳನ್ನ ಮಾತ್ರ ತೆಗೆಯಲು ಅವಕಾಶ ಸಿಗಲಿದೆ ಎಂದು ತಿಳಿಸಿದರು.