ಪಕ್ಷದ ಸಂಘಟನಾತ್ಮಕ ಯೋಜನೆಗಳನ್ನು ಕಾರ್ಯಗತಗೊಳಿಸಿ ಪಕ್ಷ ಸಂಘಟನೆಗೆ ವೇಗ ನೀಡಿ: ಕುಯಿಲಾಡಿ

ಉಡುಪಿ: ಜಿಲ್ಲಾ ಮಟ್ಟದಿಂದ ಬೂತ್ ಮಟ್ಟದವರೆಗೆ ವಿವಿಧ ಸ್ತರಗಳ ಸಹಿತ ಪಕ್ಷದ ಮೋರ್ಚಾಗಳು ಮತ್ತು ಪ್ರಕೋಷ್ಠಗಳು ನಿಗದಿತ ಸಮಯದಲ್ಲಿ ಅಗತ್ಯ ಸಭೆಗಳನ್ನು ನಡೆಸಿ ಪಕ್ಷದ ಸಂಘಟನಾತ್ಮಕ ಯೋಜನೆಗಳನ್ನು ಕಾರ್ಯಗತಗೊಳಿಸುವ ಮೂಲಕ ಜಿಲ್ಲೆಯಾದ್ಯಂತ ಪಕ್ಷ ಸಂಘಟನಾ ಚಟುವಟಿಕೆಯ ವೇಗವನ್ನು ಹೆಚ್ಚಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಅವರು ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯ ತಂಡದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪಕ್ಷದ ವಿವಿಧ ಸ್ತರಗಳ ಪ್ರತಿಯೊಬ್ಬ ಪದಾಧಿಕಾರಿಯೂ ಪ್ರತಿ ವಾರದಲ್ಲಿ ಒಂದು ದಿನ ತಮ್ಮ ಬೂತ್ ವ್ಯಾಪ್ತಿಯಲ್ಲಿ ತಳ ಮಟ್ಟದ ಕಾರ್ಯಕರ್ತರನ್ನು ಭೇಟಿಯಾಗಿ ಅಭಿವೃದ್ಧಿ ಕೆಲಸ ಕಾರ್ಯಗಳು ಮತ್ತು ಪಕ್ಷ ಸಂಘಟಟನಾ ಚಟುವಟಿಕೆಗಳಿಗೆ ಒತ್ತು ನೀಡಿ ಗ್ರಾಮ ಮಟ್ಟದಲ್ಲಿ ಪಕ್ಷ ಸಂಘಟನೆಯನ್ನು ಇನ್ನಷ್ಟು ಸದೃಢಗೊಳಿಸಬೇಕು. ಮುಂದಿನ ದಿನಗಳಲ್ಲಿ ಪಕ್ಷದ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರು ಕೂಡಾ ಗ್ರಾಮದ ಅಭಿವೃದ್ಧಿಯ ಜೊತೆಗೆ ಪಕ್ಷ ಸಂಘಟನೆಯಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡು ಸಾರ್ಥಕ ಸೇವೆ ಸಲ್ಲಿಸುವಂತಾಗಬೇಕು ಎಂದು ಅವರು ಹೇಳಿದರು.

ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಜನಪರ ಆಡಳಿತ ನೀಡುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ಗ್ರಾಮದ ಜನತೆಯ ಜೀವನಾಡಿಯಾಗಿ ಅಮೂಲ್ಯ ಸೇವೆ ಸಲ್ಲಿಸುವ ಪಣ ತೊಡಬೇಕು. ಸರಕಾರದ ವಿವಿಧ ಇಲಾಖೆಗಳ ಅನುದಾನದ ಜೊತೆಗೆ ಸಂಸದರು, ಸಚಿವರು, ಶಾಸಕರ ಸಹಕಾರದೊಂದಿಗೆ ಎಲ್ಲಾ ಕ್ಷೇತ್ರಗಳಲ್ಲಿ ಸರ್ವತೋಮುಖ ಅಭಿವೃದ್ಧಿ ಸಾಧಿಸಿ, ಪಕ್ಷ ಸಂಘಟನೆಯೊಂದಿಗೆ ಮುಂಬರಲಿರುವ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಸ್ಥಾನಗಳನ್ನು ಗೆಲ್ಲುವ ಮೂಲಕ ಉಡುಪಿಯನ್ನು ಸಂಪೂರ್ಣವಾಗಿ ಬಿಜೆಪಿ ಜಿಲ್ಲೆಯನ್ನಾಗಿಸಲು ಎಲ್ಲರೂ ಸಂಘಟಿತರಾಗಿ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ ಮತ್ತು ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್ ಮಂಗಳೂರು ಪಕ್ಷದ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ವಿಸ್ತ್ರತ ಮಾಹಿತಿ ನೀಡಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಸಂಘಟನಾತ್ಮಕ ವರದಿಯನ್ನು ಮಂಡಿಸಿದರು.

ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಮೋರ್ಚಾ ಮತ್ತು ಮಂಡಲಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪ್ರಕೋಷ್ಠಗಳ ಜಿಲ್ಲಾ ಸಂಯೋಜಕರು ಮತ್ತು ಸಂಚಾಲಕರು ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎ. ಬಾಲಚಂದ್ರ ಭಟ್ ಸ್ವಾಗತಿಸಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ವಂದಿಸಿದರು.