ದೆಹಲಿ: ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ; ಓರ್ವ ರೈತನ ಮೃತ್ಯು

ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಕಳೆದ ಎರಡು ತಿಂಗಳಿಂದ ದೆಹಲಿಯ ಗಡಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರೈತರು ಗಣರಾಜ್ಯೋತ್ಸವ ದಿನವಾದ ಮಂಗಳವಾರ ದೆಹಲಿಯ ಕೆಂಪುಕೋಟೆಗೆ ಮುತ್ತಿಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ದೆಹಲಿಯಲ್ಲಿ ರೈತರ ಪ್ರತಿಭಟನೆ ಭುಗಿಲೆದ್ದಿದ್ದು, ರೈತರು – ಪೊಲೀಸರು ನಡುವೆ ಘರ್ಷಣೆ ನಡೆದು ಪರಿಸ್ಥಿತಿ ನಿಯಂತ್ರಿಸಲು ರೈತರ ಮೇಲೆ ಪೊಲೀಸರು ಅಶ್ರುವಾಯು, ಲಾಠಿಪ್ರಹಾರ ನಡೆಸಿದ್ದಾರೆ. ಘಟನೆಯಲ್ಲಿ ಓರ್ವ ರೈತ ಮೃತಪಟ್ಟಿದ್ದಾರೆ.

ದೆಹಲಿಯ ಮುಕಾರ್ಬಾ ಚೌಕ್ ನಲ್ಲಿ ಬ್ಯಾರಿಕೇಡ್ ಗಳನ್ನು ಮುರಿಯಲು ಯತ್ನಿಸಿದ ರೈತರ ಮೇಲೆ ಪೊಲೀಸರು ಲಾಠಿ ಪ್ರಹಾರ , ಜೊತೆಗೆ ಅಶ್ರುವಾಯು ಪ್ರಯೋಗಿಸಲಾಗಿದೆ. ಆದರೂ ಜಗ್ಗದ ರೈತರು ದೆಹಲಿಯ ಹೃದಯ ಭಾಗ ತಲುಪಿದ್ದು, ಕೆಂಪು ಕೋಟೆಗೆ ನುಗ್ಗಿ ರೈತ ಧ್ವಜ ಹಾರಿಸಿದ್ದಾರೆ.

ದೆಹಲಿಯ ಟಿಕ್ರಿ, ಸಿಂಘು ಮತ್ತು ಗಾಜಿಪುರ ಗಡಿಯಲ್ಲಿ ರೈತರು ಶಾಂತಿಯುತವಾಗಿ ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು. ಬ್ಯಾರಿಕೇಡ್ ಗಳನ್ನು ಮುರಿದು ಕಾಶ್ಮೀರಿ ದ್ವಾರವನ್ನು ತಲುಪಿದ ನೂರಾರು ರೈತರ ಮೇಲೆ ಪೊಲೀಸರು ಲಾಠಿ ಚಾರ್ಚ್ ನಡೆಸಿ ಅಶ್ರುವಾಯು ಪ್ರಯೋಗಿಸಿದ್ದಾರೆ.