ವಿಜಯಪುರ: ಬ್ಲ್ಯಾಕ್‌ಮೇಲ್ ಮಾಡಿದವರಿಗೆ ಸಚಿವ ಸ್ಥಾನ ಸಿಕ್ಕಿದೆ. ಕೆಲವರು ಸಿಡಿ ತೋರಿಸಿ ಯಡಿಯೂರಪ್ಪರನ್ನ ಹೆದರಿಸಿ ಸಚಿವರಾಗಿದ್ದಾರೆ. ಇನ್ನೂ ಕೆಲವರು ಅಪಾರ ಪ್ರಮಾಣದ ಹಣ ನೀಡಿ ಸಚಿವರಾಗಿದ್ದಾರೆ. ಈ ಮೂಲಕ ಸಿಎಂ ಬಿ.ಎಸ್.ಯಡಿಯೂರಪ್ಪ ಸಮಸ್ತ ಲಿಂಗಾಯತ ಸಮುದಾಯದ ಮರ್ಯಾದೆ ತೆಗೆದಿದ್ದಾರೆ. ಅವರಿಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಹೊರಬರಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂಗೆ ಸವಾಲು ಹಾಕಿದ್ದಾರೆ.
ವಿಜಯಪುರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಶೈವ ಲಿಂಗಾಯತ ಮಠಗಳಿಗೆ ಹಣ ನೀಡಿ ನನ್ನ ಕೆಳಗಿಳಿಸಿದರೆ ಕೇಂದ್ರದ ವಿರುದ್ಧ ಬಂಡೇಳುವಂತೆ ಯಡಿಯೂರಪ್ಪ ಯೋಜನೆ ಮಾಡಿದ್ದಾರೆ. ಸಂಕ್ರಮಣದ ಉತ್ತರಾಯಣದ ಬಳಿಕ ಸಿಎಂ ಯಡಿಯೂರಪ್ಪ ಅಧಃಪತನ ಆರಂಭ. ಅವರ ಅಂತ್ಯ ಆರಂಭ ಆಗಿದೆ ಎಂದು ಸಿಎಂ ವಿರುದ್ಧ ಪ್ರಹಾರ ನಡೆಸುವ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.
ಮೊದಲು ಪಕ್ಷಕ್ಕೆ ದುಡಿದವರ ಕೋಟಾ, ಜಾತಿವಾರು ಕೋಟಾ, ಪಕ್ಷ ಅಧಿಕಾರಕ್ಕೆ ಬಂದವರ ಕೋಟಾ, ಜಿಲ್ಲಾವಾರು ಕೋಟಾ ಇತ್ತು. ಆದರೆ ಇದೀಗ ಸಿಡಿ ಕೋಟಾ ಕೂಡ ಸೇರ್ಪಡೆಯಾಗಿದೆ. ಹಣ ಕೊಟ್ಟವರಿಗೆ, ಸಿಡಿ ಇಟ್ಟುಕೊಂಡು ಬೆದರಿಕೆ ಹಾಕಿದವರಿಗೆ ಸಚಿವ ಸ್ಥಾನ ಕೊಡುತ್ತಾರೆ ಎಂದು ಲೇವಡಿ ಮಾಡಿದರು.
ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಕಾಂಗ್ರೆಸ್ ಅವರನ್ನು ಖರೀದಿಸಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ, ಜಮೀರ್ ಬಿವೈಎಸ್ ಜೊತೆಗಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸತ್ತಿದೆ. ವಿರೋಧ ಪಕ್ಷ ಅಡ್ಜಸ್ಟ್ ಮೆಂಟ್ ಮಾಡಿಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.

















