ಎರಡು ಕಾರುಗಳ ಮಧ್ಯೆ ಭೀಕರ ಅಪಘಾತ: ಕುಂದಾಪುರ ಮೂಲದ ದಂಪತಿ ಸಹಿತ ಮೂವರು ದುರ್ಮರಣ

ಶಿವಮೊಗ್ಗ: ಎರಡು ಕಾರುಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಕಾರಿನಲ್ಲಿದ್ದ ದಂಪತಿ ಸಹಿತ ಮೂವರು ಮೃತಪಟ್ಟಿದ್ದು, ಒಂದೂವರೆ ವರ್ಷದ ಮಗು ಪವಾಡ ಸದೃಶವಾಗಿ ಬದುಕುಳಿದ ಘಟನೆ ತರೀಕೆರೆ ತಾಲೂಕಿನ ರಂಗೇನಹಳ್ಳಿ ಎಂಬಲ್ಲಿ ಇಂದು ಸಂಭವಿಸಿದೆ.


ಮೃತರನ್ನು ಕಾರಿನ ಮಾಲೀಕ ಕುಂದಾಪುರ ಕಸಬಾಕೋಡಿಯ ನಾಗೆಂದ್ರ (28) ಹಾಗೂ ಅವರ ಸಂಬಂಧಿಕರಾದ ಅನಿಲ್‍ಕುಮಾರ್ ಹಾಗೂ ಅಶ್ವಿನಿ ದಂಪತಿ. ಅವರ ಒಂದೂವರೆ ವರ್ಷದ ಮಗು ಪವಾಡ ಸದೃಶವಾಗಿ ಬದುಕುಳಿದಿದೆ.


ಇವರು ನಾಗೇಂದ್ರ ಅವರ ಕಾರಿನಲ್ಲಿ ಕುಂದಾಪುರದಿಂದ ಬೆಂಗಳೂರಿಗೆ ಹೊರಟಿದ್ದರು. ತರೀಕೆರೆ ತಾಲೂಕಿನ ರಂಗೇನಹಳ್ಳಿ ಗ್ರಾಮದಲ್ಲಿ ತೆರಳುತ್ತಿದ್ದ ವೇಳೆ ಕಾರು ಎದುರಿನಿಂದ ಬಂದ ಮತ್ತೊಂದು ಕಾರು ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಕುಂದಾಪುರದಿಂದ ಬರುತ್ತಿದ್ದ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಚಾಲಕ ನಾಗೇಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ದಂಪತಿಯಾದ ಅನಿಲ್‍ಕುಮಾರ್ ಹಾಗೂ ಅಶ್ವಿನಿ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.


ಮತ್ತೊಂದು ಕಾರಿನಲ್ಲಿದ್ದ ಅಶ್ವಥ್ ಹಾಗೂ ಕಿರಣ್ ಎಂಬವರು ತರೀಕೆರೆ ತಾಲೂಕಿನ ಕರಕುಚ್ಚಿ ಕಾಲನಿ ನಿವಾಸಿಗಳಾಗಿದ್ದ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಕ್ಕವಳ್ಳಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.