ಉಡುಪಿ: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಡುಪಿ ಜಿಲ್ಲಾ ಶಾಖೆಯ ವತಿಯಿಂದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಎದುರು ಶನಿವಾರ ಪ್ರತಿಭಟನೆ ನಡೆಸಲಾಯಿತು.
ಶಿಕ್ಷಕರ ವರ್ಗಾವಣೆ ಕಾಯ್ದೆ 2017ರ ಪ್ರಕಾರ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಪ್ರತಿ ವರ್ಷ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿಯೇ ಪೂರ್ಣಗೊಳಿಸಬೇಕು. ಆದರೆ ಚುನಾವಣಾ ನೀತಿ ಸಂಹಿತೆ ಹಾಗೂ ಇತರೆ ಅನಿವಾರ್ಯ ಕಾರಣಗಳಿಂದ ಮುಂದೂಡುತ್ತಾ ಬಂದಿರುವ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ, ಕಳೆದ ಮೂರು ವರ್ಷದಿಂದ ಆಗಿಲ್ಲ. ಇದರಿಂದ ವರ್ಗಾವಣೆ ಬಯಸುತ್ತಿರುವ ಶಿಕ್ಷಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದರು.
ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದೆ. ಈ ಹಿನ್ನೆಲೆಯಲ್ಲಿ 2018ರ ನವೆಂಬರ್ 16ರಂದು ನಡೆದ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ರಾಜ್ಯ ಸರ್ಕಾರ ಫೆಬ್ರುವರಿ ತಿಂಗಳಿನಲ್ಲಿಯೇ ಶಿಕ್ಷಕರ ವರ್ಗಾವಣೆ ಮಾಡುತ್ತೇವೆಂದು ತಿಳಿಸಿತ್ತು. ಆದರೆ ಇನ್ನೂ ಕೂಡ ಯಾವುದೇ ಪ್ರಕ್ರಿಯೆಗಳಿಗೆ ಚಾಲನೆ ನೀಡದಿರುವುದು ವಿಷಾದನೀಯ. ಇನ್ನಾದರು ಸರ್ಕಾರ ಎಚ್ಚೆತ್ತುಕೊಂಡು ಮೂರು ವರ್ಷದ ವರ್ಗಾವಣೆಯ ಶೇಕಡ ಮಿತಿಯನ್ನು ಪರಿಗಣಿಸಿ ಪ್ರಸಕ್ತ ವರ್ಷದ ವರ್ಗಾವಣೆ ಪ್ರಕ್ರಿಯೆಗಳನ್ನು ಜೂನ್ ತಿಂಗಳಿಗೆ ಜಾರಿಗೆ ಬರುವಂತೆ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಭಡ್ತಿ ಪ್ರಕ್ರಿಯೆಗಳನ್ನು ಸ್ಥಗಿತಗೊಂಡಿರುವುದರಿಂದ ಸೇವಾ ನಿರತ ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ. ಹಾಗಾಗಿ ಕನಿಷ್ಠ ಷರತ್ತುಬದ್ಧ ಭಡ್ತಿಗಳನ್ನು ನೀಡಬೇಕು. ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಬೇಕು. ಭಡ್ತಿ ಹೊಂದುವ ಮುಖ್ಯ ಶಿಕ್ಷಕರಿಗೆ ಅವರ ಸೇವಾ ಜೇಷ್ಠತೆಯ ಆಧಾರದ ಮೇಲೆ ಆರ್ಥಿಕ ಸೌಲಭ್ಯ ನೀಡಬೇಕು. ಶಿಕ್ಷಕರನ್ನು ಬಿ.ಎಲ್.ಒ ಮತ್ತು ಇನ್ನಿತರ ಶಿಕ್ಷಣೇತರ ಕಾರ್ಯಗಳಿಂದ ಮುಕ್ತಗೊಳಿಸಬೇಕು. ಹಾಗೂ ಗ್ರಾಮೀಣ ಕ್ರಪಾಂಕ ಸೌಲಭ್ಯ ಪಡೆದುಕೊಂಡು ಸೇವೆಯಿಂದ ವಜಾ ಆಗಿರುವ ಶಿಕ್ಷಕರ ಪೂರ್ಣ ಸೇವೆಯನ್ನು ಪರಿಗಣಿಸಿ ಎಲ್ಲ ಸೌಲಭ್ಯಗಳನ್ನು ನೀಡಬೇಕೆಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಬಿ.ಬಿ. ಪ್ರಕಾಶ್, ಕುಂದಾಪುರ ಶಾಖೆಯ ಅಧ್ಯಕ್ಷ ಸದಾನಂದ ಶೆಟ್ಟಿ, ಬೈಂದೂರು ಶಾಖೆಯ ಅಧ್ಯಕ್ಷ ವಿಶ್ವನಾಥ ಪೂಜಾರಿ, ಬ್ರಹ್ಮಾವರ ಶಾಖಾಧ್ಯಕ್ಷ ದಿನಕರ ಶೆಟ್ಟಿ, ಉಡುಪಿ ಶಾಖೆಯ ಅಧ್ಯಕ್ಷೆ ಮಂಗಳ ಶೆಟ್ಟಿ, ಕಾರ್ಕಳ ಶಾಖಾ ಅಧ್ಯಕ್ಷ ಕೃಷ್ಣ ಮೊಯಿಲಿ, ಎನ್ ಪಿಎಸ್ ನ ಹರೀಶ್ ಪೂಜಾರಿ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಭಟನೆಯ ಆರಂಭಕ್ಕೂ ಮೊದಲು ಉಗ್ರರ ದಾಳಿಯಿಂದ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.