ಚಿಕ್ಕಮಗಳೂರು: ವಿಧಾನ ಪರಿಷತ್ತಿನ ಉಪ ಸಭಾಪತಿ ಹಾಗೂ ಜೆಡಿಎಸ್ ನಾಯಕ ಎಸ್ ಎಲ್ ಧರ್ಮೇಗೌಡ (65) ಮೃತದೇಹ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನಲ್ಲಿ ರೈಲ್ವೆ ಹಳಿ ಪಕ್ಕ ಪತ್ತೆಯಾಗಿದೆ.
ಧರ್ಮೇಗೌಡ ಅವರ ಮೃತದೇಹದ ಜತೆ ಡೆತ್ ನೋಟ್ ಸಿಕ್ಕಿದೆ. ವಿಧಾನ ಪರಿಷತ್ನಲ್ಲಿ ಈಚೆಗೆ ನಡೆದ ಘಟನೆಯ ಉಲ್ಲೇಖ ಅದರಲ್ಲಿ ಇದೆ ಎನ್ನಲಾಗಿದೆ.
ಧರ್ಮೇಗೌಡ ಅವರು ಬೀರೂರಿನ ಪರಿಚಯಸ್ಥರೊಬ್ಬರಿಗೆ ಸೋಮವಾರ ಸಂಜೆ ಫೋನ್ ಮಾಡಿ ಜನ ಶತಾಬ್ಧಿ ರೈಲಿನ ಸಮಯವನ್ನು ವಿಚಾರಿಸಿದ್ದರು. ಹುಬ್ಬಳಿಯಿಂದ ಸ್ನೇಹಿತರೊಬ್ಬರು ರೈಲಿನ್ಲಲಿ ಬರುತ್ತಿದ್ದಾರೆ ಎಂದು ಅವರಿಗೆ ತಿಳಿಸಿದ್ದರು ಎಂದು ಹೇಳಲಾಗುತ್ತಿದೆ.
ವಿಧಾನ ಪರಿಷತ್ನಲ್ಲಿ ಈಚೆಗೆ ನಡೆದ ಘಟನೆಯಿಂದ ಧರ್ಮೇಗೌಡ ಅವರು ಮನನೊಂದಿದ್ದರು, ಸಹೋದರ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರೊಂದಿಗೆ ಬೇಸರ ಹಂಚಿಕೊಂಡಿದ್ದರು ಎನ್ನಲಾಗಿದೆ.
ಧರ್ಮೇಗೌಡ ಅವರು ಮನೆಯಿಂದ ಕಾರಿನಲ್ಲಿ ತೆರಳಿದ್ದಾರೆ. ಗುಣಸಾಗರ ಸಮೀಪದ ರೈಲು ಹಳಿ ಕಾರು ನಿಲ್ಲಿಸುವಂತೆ ಚಾಲಕ ಧರ್ಮರಾಜ್ಗೆ ಹೇಳಿದ್ದಾರೆ. ಖಾಸಗಿಯಾಗಿ ಒಬ್ಬರೊಂದಿಗೆ ಮಾತನಾಡುವುದಿದೆ ಎಂದು ಚಾಲಕನಿಗೆ ತಿಳಿಸಿ ಕಾರಿನಿಂದಿಳಿದು ಹೋದವರು ವಾಪಸ್ ಬಂದಿಲ್ಲರಲಿಲ್ಲ.
ಧರ್ಮೇಗೌಡ ಅವರಿಗೆ ಪತ್ನಿ ಮಮತಾ, ಪುತ್ರ ಸೋನಲ್, ಪುತ್ರಿ ಸಲೋನಿ ಇದ್ದಾರೆ.