ಉಡುಪಿ: ಜನವರಿ 1ರಿಂದ ಸುರಕ್ಷತೆ ಹಾಗೂ ಮುಂಜಾಗ್ರತೆ ಕ್ರಮಗಳೊಂದಿಗೆ ಶಾಲೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಶಾಲಾ ಮುಖ್ಯಸ್ಥರಿಗೆ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಡಿಡಿಪಿಐ ಎನ್.ಎಚ್. ನಾಗೂರ ತಿಳಿಸಿದ್ದಾರೆ.
ಉಡುಪಿಯ ಬೋರ್ಡ್ ಹೈಸ್ಕೂಲ್‌ನಲ್ಲಿ ನಡೆದ ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯೋಪಾಧ್ಯಯರ ಸಭೆಯಲ್ಲಿ ಅವರು ಮಾತನಾಡಿದರು.
ಜ. 1ರಿಂದ 6ನೇ ತರಗತಿಯಿಂದ 9ನೇ ತರಗತಿವರೆಗೆ ವಿದ್ಯಾಗಮ–2 ಕಾರ್ಯಕ್ರಮ ಆರಂಭಿಸಬೇಕು. 10ನೇ ತರಗತಿ ವಿದ್ಯಾರ್ಥಿಗಳಿಗೆ ಅರ್ಧದಿನ ತರಗತಿ ನಡೆಸಬೇಕು. ಒಂದು ತಂಡದಲ್ಲಿ 15 ವಿದ್ಯಾರ್ಥಿಗಳು ಮಾತ್ರ ಇರುವಂತೆ ನೋಡಿಕೊಳ್ಳಬೇಕು. ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ತರಗತಿ ಆರಂಭಿಸಬೇಕು ಎಂದು ಸೂಚಿಸಿದ್ದಾರೆ.
ವಿದ್ಯಾರ್ಥಿಗಳ ಆರೋಗ್ಯ ಕಾಳಜಿಗೆ ಪ್ರತಿ ಶಾಲೆಯಲ್ಲಿ ಶಿಕ್ಷಕರೊಬ್ಬರನ್ನು ಮೆಂಟರ್ ಆಗಿ ನೇಮಿಸಬೇಕು. ವಿದ್ಯಾರ್ಥಿಗಳು ಮನೆಯಿಂದಲೇ ಕುಡಿಯುವ ನೀರು ತರಲು ಸೂಚಿಸಬೇಕು. ತರದಿದ್ದರೆ ಬಿಸಿನೀರಿನ ವ್ಯವಸ್ಥೆ ಮಾಡಬೇಕು. ಮಕ್ಕಳು ಕೈತೊಳೆಯಲು ಸೋಪ್ ವ್ಯವಸ್ಥೆ ಮಾಡುವುದು. ಎಲ್ಲ ಶಿಕ್ಷಕರು ಶಾಲೆ ಪ್ರವೇಶಿಸುವ 72 ಗಂಟೆ ಮುನ್ನ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ಇದ್ದರೆ ಮಾತ್ರ ಶಾಲೆಗೆ ಹಾಜರಾಗಬೇಕು.
ಪ್ರತಿ ಶಾಲೆಯಲ್ಲಿ ಒಂದು ಕೊಠಡಿಯನ್ನು ಐಸೊಲೇಷನ್ ಕೊಠಡಿಯಾಗಿ ಗುರುತಿಸಿ, ಶೀತ, ಕೆಮ್ಮು, ನೆಗಡಿ ಸೋಂಕು ಕಂಡುಬಂದ ಮಕ್ಕಳನ್ನು ಕೊಠಡಿಯಲ್ಲಿ ಪ್ರತ್ಯೇಕಿಸಬೇಕು ಎಂದು ನಿರ್ದೇಶನ ನೀಡಿದರು.












