ಕೋಟದಲ್ಲಿ ಹೆಜ್ಜೇನು ದಾಳಿ: ಆರು ಮಂದಿ ಮಹಿಳೆಯರು ಅಸ್ವಸ್ಥ

ಕೋಟ: ಹೆಜ್ಜೇನು ದಾಳಿಯಿಂದ ಆರು ಮಂದಿ ಮಹಿಳೆಯರು ಅಸ್ವಸ್ಥರಾದ ಘಟನೆ ಕೋಟಾ ಗ್ರಾಪಂ ವ್ಯಾಪ್ತಿಯ ಕಾಸನಗುಂದು ಎಂಬಲ್ಲಿ ನಡೆದಿದೆ.

ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ಪ್ರೇಮಾ, ಬುಡ್ಡು, ಕಾವೇರಿ, ಪದ್ದು, ಸುಶೀಲ, ಲಚ್ಚಿ ಹೆಜ್ಜೇನು ದಾಳಿಗೆ ಒಳಗಾಗಿದ್ದಾರೆ. ಇವರು ಗದ್ದೆಯಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿದ್ದ ವೇಳೆ ಹೆಜ್ಜೇನು ಹುಳುಗಳು ಏಕಾಏಕಿ ದಾಳಿ ಮಾಡಿದೆ.

ಈ ಸಂದರ್ಭದಲ್ಲಿ ಸಿಂಚನಾ ಎಂಬ ಮಹಿಳೆ ತನ್ನ ಜೀವವನ್ನು ಪಣಕ್ಕಿಟ್ಟು ಮಹಿಳೆಯರನ್ನು ರಕ್ಷಣೆ ಮಾಡಲು ಯತ್ನಿಸಿದರು. ಅಲ್ಲದೆ ತಕ್ಷಣವೇ ಆ್ಯಂಬುಲೆನ್ಸ್ ಗೆ ಕರೆ ಮಾಡಿ ಅಸ್ವಸ್ಥಗೊಂಡ ಮಹಿಳೆಯರನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು.

ಹೆಜ್ಜೇನು ದಾಳಿಯಿಂದ ಅಸ್ವಸ್ಥಗೊಂಡ ಮಹಿಳೆಯರನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆ ಪೈಕಿ ಪ್ರೇಮ ಹಾಗೂ ಬುಡ್ಡು ಎಂಬವರಿಗೆ ಸಾಕಷ್ಟು ಪ್ರಮಾಣದಲ್ಲಿ ಹೆಜ್ಜೇನು ಹುಳುಗಳು ಕಚ್ಚಿದ್ದು, ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.