ಬೆಂಗಳೂರು: ರಾಜ್ಯದಲ್ಲಿ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಸಾರಿಗೆ ಸಿಬ್ಬಂದಿ ಮುಷ್ಕರ ಕೊನೆಗೂ ಅಂತ್ಯವಾಗಿದೆ. ಆ ಮೂಲಕ ಸಾರ್ವಜನಿಕರ ಸಂಕಷ್ಟ, ಪರದಾಟಕ್ಕೆ ತೆರೆಬಿದ್ದಿದೆ.
ಸಾರಿಗೆ ಸಿಬ್ಬಂದಿ ಮುಷ್ಕರವನ್ನು ವಾಪಸ್ ಪಡೆಯುತ್ತಿದ್ದೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಅವರು ಫ್ರೀಡಂಪಾರ್ಕ್ನಲ್ಲಿ ನೌಕರರ ಸಮ್ಮುಖದಲ್ಲಿ ಘೋಷಣೆ ಮಾಡಿದರು. ಸರ್ಕಾರದಿಂದ ಲಿಖಿತ ಭರವಸೆ ದೊರತಿರುವ ಹಿನ್ನೆಲೆಯಲ್ಲಿ ಮುಷ್ಕರ ವಾಪಸ್ ಪಡೆದಿದ್ದೇವೆ ಎಂದು ಅವರು ತಿಳಿಸಿದರು.
ಸಂಜೆಯಿಂದ ಬಸ್ ಸಂಚಾರ ಆರಂಭ:
ಮುಷ್ಕರ ವಾಪಸ್ ಪಡೆದಿರುವ ಹಿನ್ನೆಲೆಯಲ್ಲಿ ಇಂದು ಸಂಜೆಯಿಂದಲೇ ಬಸ್ ಸಂಚಾರ ಆರಂಭವಾಗಿದೆ.
ನಾಳೆಯಿಂದ ನೌಕರರು ಪೂರ್ಣಪ್ರಮಾಣದಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ರಾಜ್ಯಾದ್ಯಂತ ಎಲ್ಲಾ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುತ್ತಾರೆ. ಮುಷ್ಕರದಿಂದ ತೊಂದರೆಯಾಗಿದ್ದಕ್ಕೆ ರಾಜ್ಯದ ಜನರಲ್ಲಿ ಕ್ಷಮೆಯಾಚಿಸುತ್ತೇನೆ ಎಂದರು.
ನಮ್ಮ ಮೊದಲ ಬೇಡಿಕೆ ಸರ್ಕಾರಿ ನೌಕರರಾಗಿ ಮಾಡುವುದು. ಆ ವಿಷಯದಿಂದ ನಾವು ಹಿಂದಕ್ಕೆ ಹೋಗುವುದೇ ಇಲ್ಲ. ನಿನ್ನೆ ಸರ್ಕಾರ ಒಪ್ಪಿದ್ದ 9 ಬೇಡಿಕೆಗಳು ಪರಿಷ್ಕರಣೆಯಾಗಿದೆ. ನಮ್ಮ ಮೊದಲ ಬೇಡಿಕೆ ಮಾತ್ರ ಘೋಷಣೆ ಆಗಿಲ್ಲ. ಜೊತೆಗೆ, 6ನೇ ವೇತನ ಆಯೋಗದ ಜಾರಿ 2021ರ ಜನವರಿಗೆ ಜಾರಿಯಾಗುತ್ತದೆ. ಕಾನೂನು ಪ್ರಕಾರವಾಗಿ ಜಾರಿಗೆ ಬರುತ್ತೆ, ತಡೆಯಲಾಗಲ್ಲ. ಈ ಎರಡೂ ವಿಚಾರದಲ್ಲಿ ಯಾವುದೇ ಗೊಂದಲ ಬೇಡ ಎಂದು ಹೇಳಿದರು.
ಸರ್ಕಾರಕ್ಕೆ 3 ತಿಂಗಳ ಗಡುವು:
ಸರ್ಕಾರಕ್ಕೆ 3 ತಿಂಗಳ ಗಡುವು ನೀಡುತ್ತೇವೆ. ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ಮತ್ತೆ ಪ್ರತಿಭಟನೆ ಮಾಡುತ್ತೇವೆ. ಸರ್ಕಾರದ 8-10 ಸಚಿವರು ನನ್ನ ಮೇಲೆ ಮುಗಿಬಿದ್ದಿದ್ದಾರೆ. ನನ್ನ ಮನೆಗೆ ಮುತ್ತಿಗೆ ಹಾಕುವ ಬೆದರಿಕೆ ಹಾಕಿದ್ದಾರೆ. ಇಂತಹ ಬೆದರಿಕೆಗಳಿಗೆ ನಾವು ಮಣಿಯುವುದಿಲ್ಲ. ತಿಂಗಳೊಳಗೆ ಯಾವ ಕೆಲಸ ಆಗಬೇಕೋ ಅವು ಆಗುತ್ತೆ. ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರಾಗಿ ಘೋಷಿಸಲಿ. ಇದು ಒಂದಲ್ಲ ಎರಡು ವರ್ಷವಾದರೂ ಬಿಡುವುದಿಲ್ಲ ಎಂದು ಕೋಡಿಹಳ್ಳಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.