ಕೇಂದ್ರ ಸರಕಾರದಿಂದ ಗ್ರಾಪಂಗಳಿಗೆ ನೇರ ಅನುದಾನ ಮಂಜೂರು: ಮಹೇಶ್ ಠಾಕೂರ್

ಉಡುಪಿ: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಇಡೀ ದೇಶದ ಸರ್ವತೋಮುಖ ಅಭಿವೃದ್ಧಿಯತ್ತ ಗಮನ ಹರಿಸಿ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಪಂಚಾಯತ್ ಗಳ ಅಭಿವೃದ್ದಿಯಿಂದ ದೇಶದ ಅಭಿವೃದ್ಧಿ ಎನ್ನುವ ಪರಿಕಲ್ಪನೆಯಡಿಯಲ್ಲಿ ಕಾರ್ಯಾಚರಿಸುತ್ತಿದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಗಳಿಗೆ ಅವುಗಳ ಜನಸಂಖ್ಯೆಯ ಆಧಾರದಲ್ಲಿ ನೇರ ವಾರ್ಷಿಕ ಅನುದಾನಗಳನ್ನು ಮಂಜೂರು ಮಾಡುತ್ತಿದ್ದು ಇದರ ಅನುಷ್ಠಾನ ಆಗಿದ್ದು ಗ್ರಾಮಪಂಚಾಯತ್ ಗಳು ಇದರ ಸದುಪಯೋಗವನ್ನು ಈಗಾಗಲೇ ಪಡೆದಿವೆ ಎಂದು ನಗರ  ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ರವರು ಹೇಳಿದರು.

ಅವರು ಬುಧವಾರ ಭಾರತೀಯ ಜನತಾ ಪಾರ್ಟಿ ಉಡುಪಿ ನಗರ ಇದರ ಆಶ್ರಯದಲ್ಲಿ ಶಾಸಕ ಕೆ. ರಘುಪತಿ ಭಟ್ ರವರ ಮಾರ್ಗದರ್ಶನದಲ್ಲಿ  ನಗರ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ ಗ್ರಾಮ ಪಂಚಾಯತ್ ಚುನಾವಣಾ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಅನ್ಯ  ಸಭೆಯಲ್ಲಿ ಅನ್ಯ ಪಕ್ಷಗಳಿಂದ ಅಸಂಖ್ಯಾತ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ ಗೊಂಡರು. ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ರವರು ಅವರಿಗೆ ಪಕ್ಷದ ಶಾಲು ಹೊದಿಸಿ ಬಾವುಟ ನೀಡಿ ಬರ ಮಾಡಿಕೊಂಡರು. ಇತ್ತೀಚಿಗೆ ನಿಧನರಾದ ಪಕ್ಷದ ಹಿರಿಯ ಕಾರ್ಯಕರ್ತ ಅನಂತಕೃಷ್ಣ ಮಾಧವ ಹೆಗ್ಡೆ ಹಾಗು ಅಫಘಾತದಲ್ಲಿ ಮೃತರಾದ ದಕ್ಷಿಣ ಕನ್ನಡ ಕೆಎಂಎಫ್ ಅಧ್ಯಕ್ಷರಾದ ಹದ್ದೂರು ರಾಜೀವ್ ಶೆಟ್ಟಿ ಯವರಿಗೆ ಸಂತಾಪ ಸೂಚಿಸಲಾಯಿತು.

ರಾಜ್ಯ ಮೀನುಗಾರಿಕಾ ಪ್ರಕೋಷ್ಠ ಸಂಚಾಲಕ ಯಶಪಾಲ್ ಸುವರ್ಣ, ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಪದಾಧಿಕಾರಿ ಸಲೀಂ ಅಂಬಾಗಿಲು, ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ಚುನಾವಣಾ ಪರಿಶೀಲನಾ ಪ್ರಮುಖರಾದ ಪ್ರಭಾಕರ್ ಪೂಜಾರಿ, ವಿಜಯ ಕೊಡವೂರು, ನಗರ ಬಿಜೆಪಿ ಕಾರ್ಯಕಾರಿಣಿ ಪದಾಧಿಕಾರಿಗಳು, ಚುನಾವಣಾ ಪ್ರಭಾರಿ ಮತ್ತು ಸಹ ಪ್ರಭಾರಿಗಳು, ಮಹಾಶಕ್ತಿ ಕೇಂದ್ರ ಸಂಚಾಲಕರುಗಳು ಮತ್ತು ಸಹಸಂಚಾಲಕರುಗಳು, ಶಕ್ತಿ ಕೇಂದ್ರ ಸಂಚಾಲಕರುಗಳು, ಎಲ್ಲಾ ಮೋರ್ಚಾದ ಅಧ್ಯಕ್ಷರುಗಳು ಮತ್ತು ಪ್ರಧಾನ ಕಾರ್ಯದರ್ಶಿಗಳು, ನಗರಸಭಾ ಸದಸ್ಯರುಗಳು, ಅಭ್ಯರ್ಥಿ ಪ್ರಮುಖರುಗಳು ಹಾಜರಾಗಿದ್ದರು.

ನಗರ ಬಿಜೆಪಿ ಪ್ರದಾನ ಕಾರ್ಯದರ್ಶಿಗಳಾದ ಮಂಜುನಾಥ್ ಮಣಿಪಾಲ ನಿರೂಪಿಸಿ ಮತ್ತು ದಿನೇಶ್ ಅಮೀನ್ ವಂದಿಸಿದರು.