ಉಡುಪಿ: ಮುಂದಿನ ಉತ್ತರಾಯಣದಲ್ಲಿ ಶಿರೂರು ಮಠಕ್ಕೆ ಉತ್ತರಾಧಿಕಾರಿಯನ್ನು ನೇಮಕ ಮಾಡಲಾಗುವುದು ಎಂದು ಸೋದೆ ಮಠಾಧೀಶ ವಿಶ್ವವಲ್ಲಭತೀರ್ಥ ಶ್ರೀಪಾದರು ಹೇಳಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಶಿರೂರು ಮಠಕ್ಕೆ ಯೋಗ್ಯ ವಟುವನ್ನು ಆಯ್ಕೆ ಮಾಡಿದ್ದೇವೆ. ಆತನಿಗೆ ವೇದಾಭಾಸ್ಯಗಳ ತರಬೇತಿ ನೀಡಲಾಗುತ್ತಿದೆ. ಇದಕ್ಕೆ ಅಷ್ಟಮಠಗಳ ಹಿರಿಯ ಮಠಾಧೀಶರ ಪ್ರೋತ್ಸಾಹ, ಸಹಕಾರವಿದೆ. ಎಲ್ಲರೂ ಮನಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಶಿರೂರು ಮಠ ಇನ್ನಷ್ಟು ಅಭಿವೃದ್ಧಿ ಹೊಂದಬೇಕು. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಶಿರೂರು ಲಕ್ಷ್ಮೀವರತೀರ್ಥ ಸ್ವಾಮೀಜಿ ವೃಂದಾವನವೃಸ್ಥರಾದ ಮೇಲೆ ಮಠದ ಎಲ್ಲ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿಕೊಂಡು ಬರಲಾಗುತ್ತಿದೆ. ಶಿರೂರು ಮೂಲ ಮಠದಲ್ಲೂ ಕಾಲಕ್ಕೆ ತಕ್ಕಂತೆ ಜೀರ್ಣೋದ್ಧಾರ ಮಾಡಲಾಗಿದೆ ಎಂದು ತಿಳಿಸಿದರು.
ಸಾಂತಿಯೂರು ಮಠದ ಜೀರ್ಣೋದ್ಧಾರ:
ಶಿರೂರು ಮೂಲ ಮಠದಿಂದ ಎರಡು ಕಿ.ಮೀ ದೂರದಲ್ಲಿ ಅತ್ಯಂತ ಪ್ರಾಚೀನವಾದ ಸಾಂತಿಯಾರು ಮಠವಿದೆ. ಶಿರೂರು ಮಠದಲ್ಲಿರುವಂತೆ ಅಲ್ಲಿಯೂ ಮುಖ್ಯಪ್ರಾಣ ದೇವರ ಸನ್ನಿಧಾನವಿದೆ. ಅದು ಸಂಪೂರ್ಣ ಶಿಥಿಲಗೊಂಡಿದ್ದು, ಕುಸಿದು ಬೀಳುವ ಸ್ಥಿತಿಯಲ್ಲಿತ್ತು. ಮುಖ್ಯಪ್ರಾಣ ದೇವರಿಗೂ ಪೂಜೆ ನಿಂತುಹೋಗಿತ್ತು. ಇದೀಗ ಅಲ್ಲಿನ ಮುಖ್ಯಪ್ರಾಣ ದೇವರನ್ನು ಬೇರೆಡೆಯಲ್ಲಿ ಪ್ರತಿಷ್ಠಾಪನೆ ಮಾಡಿದ್ದು, ಅಲ್ಲಿನ ಗ್ರಾಮಸ್ಥರ ಸಹಕಾರದೊಂದಿಗೆ ಮಠದ ಜೀರ್ಣೋದ್ಧಾರ ಕಾರ್ಯ ಮಾಡಲಾಗುತ್ತಿದೆ. ಮುಂದಿನ ರಾಮನವಮಿಯ ಸಂದರ್ಭದಲ್ಲಿ ಮಠವನ್ನು ಸಮರ್ಪಣೆ ಮಾಡಬೇಕೆಂಬ ಸಂಕಲ್ಪ ಮಾಡಲಾಗಿದೆ ಎಂದು ಹೇಳಿದರು.
ಹಿರಿಯಡಕದ ಸಮೀಪ ಪಾಪೂಜೆ ಎಂಬ ಮಠವಿದ್ದು, ಅಲ್ಲಿ ಶಿರೂರು ಮಠದ ಗುರು ಪರಂಪರೆಯಲ್ಲಿ ಬಂದ ಯತಿಗಳ ವೃಂದಾವನ ಕೂಡ ಇದೆ. ಅಲ್ಲಿನ ಪರಿಸ್ಥಿತಿಯೂ ದುಸ್ಥಿತಿಯಲ್ಲಿದೆ. ಅದನ್ನು ಕೂಡ ಜೀರ್ಣೋದ್ಧಾರ ಮಾಡುವ ಸಂಕಲ್ಪ ಮಾಡಲಾಗಿದೆ ಎಂದರು.
ಅದೇ ರೀತಿ ಶಿರೂರು ಮೂಲ ಮಠದ ಪಕ್ಕದಲ್ಲೇ ದುರ್ಗಾಪರಮೇಶ್ವರಿ ದೇವಿಯ ಗದ್ದುಗೆ ಇದ್ದು, ಅದನ್ನು ಊರಿನವರ ಸಹಕಾರದೊಂದಿಗೆ ಜೀರ್ಣೋದ್ಧಾರ ಮಾಡಲಾಗುತ್ತಿದೆ. ಮುಂದಿನ ರಾಮನವಮಿಯ ಹೊತ್ತಿಗೆ ಅದರ ಬ್ರಹ್ಮಕಲಶೋತ್ಸವ ನೆರವೇರಲಿದೆ ಎಂದು ತಿಳಿಸಿದರು.
ಪಲಿಮಾರು ಮಠಾಧೀಶ ವಿದ್ಯಾಧೀಶ ಸ್ವಾಮೀಜಿ, ಉಡುಪಿ ಮಾನವಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ರವೀಂದ್ರನಾಥ್ ಶಾನುಭಾಗ್, ಉದ್ಯಮಿ ದಿವಾಕರ ಶೆಟ್ಟಿ, ಎಂ.ಬಿ. ಪುರಾಣಿಕ್, ಉದ್ಯಮಿ ರತ್ನ ಕುಮಾರ್ ಇದ್ದರು.