ಟಿ ಟ್ವೆಂಟಿ: ಆಸೀಸ್ ವಿರುದ್ಧ ಭಾರತಕ್ಕೆ ರೋಚಕ ಜಯ

ಕ್ಯಾನ್‌ಬೆರಾ: ಇಲ್ಲಿನ ಮನುಕಾ ಓವಲ್‌ ಮೈದಾನದಲ್ಲಿ ಇಂದು ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 11 ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ.
ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದ ಮಹತ್ವದ ಮುನ್ನಡೆ ದಾಖಲಿಸಿದೆ. ಬದಲಿ ಆಟಗಾರ ಯಜುವೇಂದ್ರ ಚಹಲ್ ಹಾಗೂ ಡೆಬ್ಯು ವೇಗಿ ಟಿ ನಟರಾಜನ್ ಪರಿಣಾಮಕಾರಿ ಪ್ರದರ್ಶನ ತೋರುವ ಮೂಲಕ ಟೀಮ್ ಇಂಡಿಯಾ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ, ಕೆಎಲ್ ರಾಹುಲ್ ಆಕರ್ಷಕ ಅರ್ಧಶತಕ (51) ಹಾಗೂ ರವೀಂದ್ರ ಜಡೇಜ 23 ಎಸೆತಗಳಲ್ಲಿ ಬಿರುಸಿನ 44* ರನ್ ಗಳಿಸುವ ಮೂಲಕ ಸ್ಪರ್ಧಾತ್ಮಕ ಮೊತ್ತದತ್ತ ಮುನ್ನಡೆಸಿದರು.

ಬಳಿಕ 162 ರನ್ ಗೆಲುವಿನ ಗುರಿ ಬೆನ್ನಟ್ಟಿದ ಆಸೀಸ್, ಯಜುವೇಂದ್ರ ಚಹಲ್ ಹಾಗೂ ಟಿ. ನಟರಾಜನ್ ಮಾರಕ ದಾಳಿಗೆ ಕುಸಿದು 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 150 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ 11 ರನ್ ಅಂತರದ ಗೆಲುವು ದಾಖಲಿಸಿದೆ. ಚಹಲ್ ಹಾಗೂ ನಟರಾಜನ್ ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದರು.