ಉಡುಪಿ: ಹೊಸವರ್ಷ ಆಚರಣೆ ಸಂದರ್ಭದಲ್ಲಿ ರಾಜ್ಯದಲ್ಲಿ ನೈಟ್ ಕರ್ಪ್ಯೂ ಹೇರುವ ಕುರಿತು ಯಾವುದೇ ನಿರ್ಧಾರ ಆಗಿಲ್ಲ. ಆದರೆ ತಜ್ಞರು ಹೆಚ್ಚು ಜನರು ಗುಂಪು ಸೇರಲು ಅವಕಾಶ ನೀಡಬಾರದೆಂದು ಸಲಹೆ ನೀಡಿದ್ದಾರೆ. ಹಾಗಾಗಿ ಇಂದು ಅಥವಾ ನಾಳೆ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸವರ್ಷ ಆಚರಣೆ ಸಂದರ್ಭದಲ್ಲಿ ಜನಸಂದಣಿ ಆಗಬಾರದು. ಅದಕ್ಕೆ ನೈಟ್ ಕರ್ಪ್ಯೂ ಹೊರತುಪಡಿಸಿ ಯಾವುದೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು ಎನ್ನುವುದರ ಬಗ್ಗೆ ಆರೋಗ್ಯ ಸಚಿವರು ತಜ್ಞರ ಜತೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
ಕನ್ನಡ ಪರ ಸಂಘಟನೆ ಡಿಸೆಂಬರ್ 5ರಂದು ಕರ್ನಾಟಕ ಬಂದ್ ಗೆ ಕರೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಂದು ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ. ಸರ್ಕಾರಿ ಬಸ್ ಗಳು ಓಡಾಡಲಿವೆ. ಬಂದ್ ಮಾಡಬಾರದೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಬಂದ್ ಮಾಡಿದರೆ ಕೋರ್ಟ್ ಸ್ಪಷ್ಟ ಉಲ್ಲಂಘನೆ ಆಗುತ್ತೆ. ಹಾಗಾಗಿ ಮುಖ್ಯಮಂತ್ರಿಗಳ ಜತೆಗೆ ನಾನು ಬಂದ್ ಮಾಡಬೇಡಿಯೆಂದು ಮನವಿ ಮಾಡಿದ್ದೇನೆ ಎಂದರು.
ಒಂದು ವೇಳೆ ಬಂದ್ ಮಾಡಿದರೂ ಅಗತ್ಯ ಭದ್ರತೆಗಳನ್ನು ಕೈಗೊಳ್ಳುತ್ತೇವೆ. ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ನೀಡಲ್ಲ ಎಂದು ಹೇಳಿದರು.
ಡಿಜೆ ಹಳ್ಳಿ ಗಲಭೆಗೆ ಸಂಬಂಧಿಸಿ ಮಾಜಿ ಕಾರ್ಪೋರೇಟರ್ ಜಾಕೀರ್ ಹುಸೇನ್ ನನ್ನು ಬಂಧಿಸಲಾಗಿದೆ. ಇಂದು ಕೋರ್ಟ್ ಗೆ ರಜೆ ಇರುವುದರಿಂದ ನಾಳೆ ಕೋರ್ಟ್ ಗೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗುತ್ತದೆ. ಮಾಜಿ ಸಚಿವ ವರ್ತೂರ್ ಪ್ರಕಾಶ್ ಅವರ ಅಪಹರಣ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದರು.
ಬಿಜೆಪಿಯಲ್ಲಿ ಯಾವುದೇ ಗೊಂದಲ ಇಲ್ಲ. ಕೇಂದ್ರ ನಾಯಕರು ಹಾಗೂ ಮುಖ್ಯಮಂತ್ರಿಗಳು ಸಮಾಲೋಚನೆ ನಡೆಸಿ ಸಚಿವಸಂಪುಟ ವಿಸ್ತರಣೆ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ತಿಳಿಸಿದರು.