ಉಡುಪಿ: ಚಿತ್ರ ಪ್ರದರ್ಶನ ಆರಂಭಿಸಿದ ಡಯಾನ ಚಿತ್ರಮಂದಿರ

ಉಡುಪಿ: ಕೋವಿಡ್ ಕಾರಣದಿಂದ ಕಳೆದ ಎಂಟು ತಿಂಗಳಿನಿಂದ ಬಾಗಿಲು ಮುಚ್ಚಿದ್ದ ಜಿಲ್ಲೆಯ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಮುಂದಿನ ವಾರದಿಂದ ಪ್ರದರ್ಶನ ಆರಂಭಿಸುವ ಸಾಧ್ಯತೆ ಇದೆ. ಡಯಾನ ಚಿತ್ರಮಂದಿರ ಈ ವಾರದಿಂದಲೇ ಪ್ರದರ್ಶನ ಆರಂಭಿಸಿದೆ.

ಲಾಕ್ ಡೌನ್ ತೆರವುಗೊಂಡ ಬಳಿಕ ಚಿತ್ರಮಂದಿರಗಳನ್ನು ತೆರೆಯಲು‌ ಸರ್ಕಾರ ಅವಕಾಶ ಕಲ್ಪಿಸಿತ್ತು‌. ಆದರೆ ಹೊಸ ಸಿನಿಮಾಗಳು, ಸ್ಟಾರ್ ನಾಯಕರ ಚಿತ್ರಗಳು ಬಿಡುಗಡೆ ಆಗದ ಕಾರಣ ಹಾಗೂ ಪ್ರೇಕ್ಷಕರ ಕೊರತೆಯಿಂದ ಉಡುಪಿ ನಗರ ಸಹಿತ ಜಿಲ್ಲೆಯ ಚಿತ್ರಮಂದಿರಗಳು ಇದುವರೆಗೂ ಪ್ರದರ್ಶನ ಆರಂಭಿಸಿಲ್ಲ.

ಇದೀಗ ಉಡುಪಿ ಡಯಾನ ಚಿತ್ರಮಂದಿರ ಇಂದಿನಿಂದ ಸಿನಿಮಾ ಪ್ರದರ್ಶನ ಆರಂಭಿಸಿದೆ. ಆಕ್ಟ್-1978 ಕನ್ನಡ ಸಿನಿಮಾ ಪ್ರದರ್ಶನಗೊಳ್ಳುತ್ತಿದೆ. ಕೋವಿಡ್ ಮಾರ್ಗಸೂಚಿಯಂತೆ ಪ್ರದರ್ಶನ ಕಾಣುತ್ತಿದೆ. ಆದರೆ, ಸದ್ಯ ಪ್ರೇಕ್ಷಕರ ಕೊರತೆಯಿಂದ ಬೆಳಗ್ಗಿನ ಪ್ರದರ್ಶನವನ್ನು ರದ್ದುಪಡಿಸಲಾಗಿದ್ದು, ಮಧ್ಯಾಹ್ನ, ಸಂಜೆ ಹಾಗೂ ರಾತ್ರಿ ಪ್ರದರ್ಶನ ಮಾತ್ರ ಆರಂಭಿಸಲಾಗಿದೆ.

ಮುಂದಿನ ವಾರದಿಂದ ಉಡುಪಿ ನಗರ ಸಹಿತ ಜಿಲ್ಲೆಯ ಇತರ ಚಿತ್ರಮಂದಿರಗಳು ಬಾಗಿಲು ತೆರೆಯುವ ಸಾಧ್ಯತೆ ಇದೆ.