ಸಿಡ್ನಿ: ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ಭರ್ಜರಿ ಗೆಲುವು

ಸಿಡ್ನಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ
ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 66 ರನ್ ಗಳ ಗೆಲುವು ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ 6 ವಿಕೆಟ್ ನಷ್ಟಕ್ಕೆ 374 ರನ್ ದಾಖಲಿಸಿತ್ತು. ಈ ಸವಾಲನ್ನು ಸ್ವೀಕರಿಸಿ ಬ್ಯಾಟಿಂಗ್‌ಗಿಳಿದ ಭಾರತ ತಂಡದ ಆರಂಭಿಕ ಪ್ರದರ್ಶನ ನಿರಾಸೆ ಮೂಡಿಸಿತ್ತು. ಆರಂಭಿಕ ದಾಂಡಿಗರಾಗಿ ಮಯಂಕ್ ಅಗರವಾಲ್  ಮತ್ತು ಶಿಖರ್ ಧವನ್ ಕ್ರೀಸ್‌ಗಿಳಿದಿದ್ದು 6ನೇ ಓವರ್‌ನಲ್ಲಿ ಮಯಂಕ್ ವಿಕೆಟ್ ಕಳೆದುಕೊಂಡರು.

ಮಯಂಕ್ ಅಗರ್‌ವಾಲ್ 22 ರನ್ ದಾಖಲಿಸಿ ಮ್ಯಾಕ್ಸ್‌ವೆಲ್‌ಗೆ ಕ್ಯಾಚಿತ್ತು  ಪೆವಿಲಿಯನ್‌ಗೆ ನಡೆದಾಗ ಮೂರನೇ  ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ  ನಾಯಕ ವಿರಾಟ್ ಕೊಹ್ಲಿ 21 ಎಸೆತಗಳಲ್ಲಿ 21 ರನ್ ದಾಖಲಿಸಿ ಹ್ಯಾಜಲ್‌ವುಡ್ ಎಸೆತಕ್ಕೆ ಔಟಾದರು. ನಂತರ ಬಂದ ಶ್ರೇಯಸ್ ಅಯ್ಯರ್ (2),ಕೆ,ಎಲ್.ರಾಹುಲ್ (12) ರನ್ ಗಳಿಸಿ ಪೆವಿಲಿಯನ್‌ತ್ತ ಹೆಜ್ಜೆ ಹಾಕಿದರು.

ಶಿಖರ್ ಧವನ್ 86 ಎಸೆತಗಳಲ್ಲಿ 10 ಬೌಂಡರಿಗಳೊಂದಿಗೆ ಧವನ್  74 ರನ್ ದಾಖಲಿಸಿದ್ದಾರೆ.  ಹಾರ್ದಿಕ್ ಪಾಂಡ್ಯ 76 ಎಸೆತಗಳಲ್ಲಿ  90 ರನ್ ಸಿಡಿಸಿದರು. ಅದ್ಭುತ ಪ್ರದರ್ಶನ ನೀಡಿದ ಪಾಂಡ್ಯ 7 ಸಿಕ್ಸರ್ ಮತ್ತು 4 ಬೌಂಡರಿ ಬಾರಿಸಿದ್ದಾರೆ.  ನಂತರ ಬಂದ ರವೀಂದ್ರ ಜಡೇಜಾ 37 ಎಸೆತಗಳಲ್ಲಿ 25  ರನ್  ದಾಖಲಿಸಿ ಜಂಪಾ ಎಸೆತಕ್ಕೆ ಔಟಾದರು.
ನಿಗದಿತ 50 ಓವರ್‌ಗಳಲ್ಲಿ ಭಾರತ 8 ವಿಕೆಟ್ ಕಳೆದುಕೊಂಡು 308 ರನ್ ಕಲೆ ಹಾಕಿತು.

 

ಆಸ್ಟ್ರೇಲಿಯಾದ ಪರವಾಗಿ ಜೋಶ್ ಹ್ಯಾಜಲ್‌ವುಡ್  3 ವಿಕೆಟ್,ಸ್ಟಾರ್ಕ್ -1 ಮತ್ತು ಆ್ಯಡಂ ಜಂಪಾ 4 ವಿಕೆಟ್ ಕಬಳಿಸಿದ್ದಾರೆ.

ಆಸ್ಟ್ರೇಲಿಯಾದ ಡೇವಿಡ್ ವಾರ್ನರ್  (69 ), ಆ್ಯರನ್ ಫಿಂಚ್  (114), ಸ್ಟೀವ್ ಸ್ಮಿತ್  (105), ಗ್ಲೆನ್ ಮ್ಯಾಕ್ಸ್‌ವೆಲ್‌ (45) – ಈ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದರು. ಭಾರತದ ಪರವಾಗಿ  ಮೊಹಮ್ಮದ್ ಶಮಿ- 3,  ಜಸ್‌ಪ್ರೀತ್ ಬೂಮ್ರಾ,ನವದೀಪ್ ಸೈನಿ, ಯಜುವೇಂದ್ರ ಚಾಹಲ್ ತಲಾ 1 ವಿಕೆಟ್  ಗಳಿಸಿದ್ದಾರೆ.