ಉಡುಪಿ: ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಮಾಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ. ಅವರು ಕೇಂದ್ರದ ನಾಯಕರ ಜತೆ ಸಮಾಲೋಚನೆ ಮಾಡಿಕೊಂಡು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಉಡುಪಿಯ ಕಂಟ್ರಿ ಇನ್ ಹೋಟೆಲ್ ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಅನುದಾನ, ಯೋಜನೆ ತರಲು ರಾಜ್ಯದ ಮಂತ್ರಿಗಳು ದೆಹಲಿಗೆ ನಿರಂತರ ಭೇಟಿ ನೀಡುವುದು ಸಹಜ. ಅಲ್ಲಿಗೆ ಹೋದಾಗ ಕೇಂದ್ರ ನಾಯಕರನ್ನು ಭೇಟಿಯಾಗುವುದು ಕೂಡ ಸಹಜ ಪ್ರಕ್ರಿಯೆ ಎಂದರು.
ಮಂಗಳೂರಿನ ‘ಲಷ್ಕರ್ ಜಿಂದಾಬಾದ್’ ಗೋಡೆ ಬರಹಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ರಾಷ್ಟ್ರ ವಿರೋಧಿ ಬರಹ, ಘೋಷಣೆ ಕೂಗಿದರೆ ಅದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಅದನ್ನು ನಮ್ಮ ಸರ್ಕಾರ ಮಾಡುತ್ತದೆ ಎಂದರು.
ಲವ್ ಜಿಹಾದ್ ತಡೆಗೆ ರಾಜ್ಯದಲ್ಲೂ ಅತೀ ಶೀಘ್ರದಲ್ಲೇ ಕಠಿಣ ಕಾನೂನು ಜಾರಿಗೊಳಿಸಲಾಗುವುದು. ಮಂಗಳೂರು ವಿಮಾನ ನಿಲ್ದಾಣಕ್ಕೆ ಬೇರೆ ಹೆಸರಿಡುವ ಕುರಿತಂತೆ ಎಲ್ಲರ ಅಭಿಪ್ರಾಯ, ಪ್ರಸ್ತಾವನೆ ಪಡೆದುಕೊಂಡು ಸೂಕ್ತ ಚರ್ಚೆ ನಡೆಸಿ ಕಾನೂನು ಪ್ರಕಾರ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.












