ಮಂಗಳೂರು: ಇಲ್ಲಿನ ಅಪಾರ್ಟ್ ಮೆಂಟ್ ಕಟ್ಟಡವೊಂದರ ಕಂಪೌಂಡ್ ಗೋಡೆ ಮೇಲೆ ‘ ಲಷ್ಕರ್ ಜಿಂದಾಬಾದ್’ ಎಂಬ ಉಗ್ರ ಸಂಘಟನೆಯನ್ನು ಬೆಂಬಲಿಸುವ ಬರಹಗಳು ಇಂದು ಕಂಡುಬಂದಿದ್ದು, ಆ ಮೂಲಕ ಮತಾಂಧರು ಮತ್ತೆ ಮಂಗಳೂರಿನಲ್ಲಿ ಶಾಂತಿ ಕದಡಲು ಸಂಚು ರೂಪಿಸುತ್ತಿದ್ದಾರ ಎಂಬ ಶಂಕೆ ಮೂಡಿದೆ.
ಮಂಗಳೂರಿನ ಸರ್ಕ್ಯೂಟ್ ಹೌಸ್ ಬಳಿ ಇರುವ ಅಪಾರ್ಟ್ ಮೆಂಟ್ ಗೋಡೆ ಮೇಲೆ ‘ಲಷ್ಕರ್ ಜಿಂದಾಬಾದ್ do not force us to invite lashkar e toiba’ ಎಂಬ ಪ್ರಚೋದನಕಾರಿ ಬರಹ ಕಾಣಿಸಿಕೊಂಡಿದೆ. ಇದು ರಾತ್ರಿಯ ವೇಳೆಯಲ್ಲಿ ಯಾರೋ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಮಾಡಿರುವ ಕೃತ್ಯ. ಕೋಮು ಭಾವನೆ ಕೆರಳಿಸುವ ಸಲುವಾಗಿ ಈ ಬರಹವನ್ನು ಬರೆಯಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಕಟ್ಟಡದ ಸಮೀಪದಲ್ಲೇ ಕದ್ರಿ ಪೊಲೀಸ್ ಠಾಣೆ ಇದೆ. ಆದರೂ ದುಷ್ಕರ್ಮಿಗಳು ಪ್ರಚೋದನಕಾರಿ ಬರಹ ಬರೆಯುವ ಭಂಡತನ ತೋರಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದೀಚೆಗೆ ಮಂಗಳೂರಿನಲ್ಲಿ ಉಗ್ರರ ಹೆಜ್ಜೆ ಗುರುತು ಕಂಡುಬರುತ್ತಿದ್ದು, ಈ ನಿಟ್ಟಿನಲ್ಲಿ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಲು ಈ ಭಾಗದಲ್ಲಿ ಅಳವಡಿಸಿರುವ ಸಿಸಿಟಿವಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.












