ಕೋಲ್ಕತ್ತಾ: ನಾನು ರಾಜಕೀಯ ತೊರೆದು ಸಾಯಲು ಸಿದ್ಧ. ಆದರೆ ಎಂದಿಗೂ ಬಿಜೆಪಿಗೆ ಸೇರುವುದಿಲ್ಲ ಎಂದು ಟಿಎಂಸಿ ಸಂಸದ ಸೌಗತ ರಾಯ್ ಬಿಜೆಪಿ ನಾಯಕರಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಪಶ್ಚಿಮ ಬಂಗಾಳದ ಅನುಭವಿ ಸಂಸದ ಸೌಗತ ರಾಯ್ ಸೇರಿದಂತೆ ಕನಿಷ್ಠ ಐವರು ತೃಣಮೂಲ ಕಾಂಗ್ರೆಸ್ ಸಂಸದರು ಪಕ್ಷಕ್ಕೆ ರಾಜಿನಾಮೆಕೊಟ್ಟು ಬಿಜೆಪಿಗೆ ಬರಲಿದ್ದಾರೆ ಎಂದು ಬಿಜೆಪಿ ಸಂಸದ ಅರ್ಜುನ್ ಸಿಂಗ್ ಕೆಲ ದಿನಗಳ ಹಿಂದೆ ಹೇಳಿಕೆ ನೀಡಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದ ಸೌಗತ ರಾಯ್, ಇದೊಂದು ಬಿಜೆಪಿ ಪ್ರಚಾರದ ಕಲೆ. ಅರ್ಜುನ್ ಸಿಂಗ್ ಈ ರೀತಿ ಆರೋಪಿಸುವುದರಲ್ಲಿ ಪ್ರಸಿದ್ಧ ಬಾಹುಬಲಿ. ನಾನು ರಾಜಕೀಯ ತೊರೆದು ಸಾಯಲು ಸಿದ್ಧ. ಆದರೆ ಎಂದಿಗೂ ಬಿಜೆಪಿಗೆ ಸೇರುವುದಿಲ್ಲ ಅವರ ಜೊತೆ ಕೈ ಜೋಡಿಸುವುದಿಲ್ಲ. ಮೇಲಾಗಿ ನಾನು ಮಾರಾಟವಾಗುವ ಸರಕು ಅಲ್ಲ ಎಂದೂ ಅವರು ಪ್ರತ್ಯುತ್ತರ ನೀಡಿದ್ದಾರೆ.