ಉಡುಪಿ: ಕೊಕ್ಕರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಟಂಬೈಲು ಪ್ರದೇಶದಲ್ಲಿ ವಾರಾಹಿ ಇಲಾಖೆಯಿಂದ ನಿರ್ಮಾಣಗೊಂಡಿರುವ ರಸ್ತೆ ಕಳಪೆಯಿಂದ ಕೂಡಿದ್ದು, ಈ ಕಾಮಗಾರಿಯಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆದಿದೆ. ಕಾಮಗಾರಿಗೆ ₹ 2 ಕೋಟಿ ಪಾವತಿಯಾಗಿದೆ. ಈ ಬಗ್ಗೆ ಲೋಕಾಯುಕ್ತದಿಂದ ಸಮಗ್ರ ತನಿಖೆ ನಡೆಸುವಂತೆ ಸದಸ್ಯ ಜನಾರ್ದನ ತೋನ್ಸೆ ಆಗ್ರಹಿಸಿದರು.
ಈ ಕುರಿತಂತೆ ಲೋಕಾಯುಕ್ತಕ್ಕೆ ಪತ್ರ ಬರೆಯಲು ಜಿಪಂ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.
ಲಾಕ್‍ಡೌನ್ ಅವಧಿಯಲ್ಲಿ ಬೈಂದೂರು ವ್ಯಾಪ್ತಿಯಲ್ಲಿ ಅಕ್ಷರ ದಾಸೋಹ ಯೋಜನೆಯಡಿ ಅಕ್ಕಿ ಮತ್ತು ಬೇಳೆಯನ್ನು ವಿತರಿಸಿರುವಲ್ಲಿ ಅವ್ಯವಹಾರ ನಡೆದಿದೆ. ಈ ಬಗ್ಗೆ ನೀಡಲಾಗಿರುವ ಸಂಬಂದಪಟ್ಟ ಇಲಾಖೆ ನೀಡಿರುವ ದಾಖಲೆಗಳು ಸಹ ಸಮರ್ಪಕವಾಗಿಲ್ಲ. ಶಿಕ್ಷಕರ ನಿಯೋಜನೆಯಲ್ಲಿ ನಿಯಮ ಮೀರಿ ಮಾಡಲಾಗಿದೆ. ಈ ಎರಡೂ ಪ್ರಕರಣಗಳ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸದಸ್ಯರಾದ ಶಂಕರ್ ಪೂಜಾರಿ ಮತ್ತು ಬಾಬು ಶೆಟ್ಟಿ ಒತ್ತಾಯಿಸಿದರು.
ಈ ಬಗ್ಗೆ 10 ದಿನದಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಸಿಇಓ ಡಾ. ನವೀನ್ ಭಟ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನೆರೆಯಿಂದ ಹಾನಿಯಾದವರಿಗೆ ₹ 10 ಸಾವಿರ ಪರಿಹಾರ ನೀಡಿದ್ದು ಬಿಟ್ಟರೆ ಹೆಚ್ಚಿನ ಪರಿಹರ ವಿತರಣೆಯಾಗಿಲ್ಲ ಎಂದು ಸದಸ್ಯೆ ಚಂದ್ರಿಕಾ ಕೇಲ್ಕರ್ ಸಭೆಯ ಗಮನಕ್ಕೆ ತಂದರು. ಪ್ರಸ್ತುತ ತಾತ್ಕಾಲಿಕ ಪರಿಹಾರ ಮಾತ್ರ ನೀಡಿದ್ದು, ನಷ್ಟದ ವರದಿ ಆಧರಿಸಿ ಪರಿಹಾರವನ್ನು ವಿತರಿಸಲಾಗುವುದು. ನೆರೆ ಹಾನಿ ಕುರಿತು ಪರಿಹಾರಕ್ಕೆ ಅರ್ಜಿ ಸಲ್ಲಿಸದೇ ಬಾಕಿ ಇರುವವರು ನವೆಂಬರ್ 30 ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕುರಿತಂತೆ ಗೀತಾಂಜಲಿ ಸುವರ್ಣ, ಶಶಿಕಾಂತ ಪಡುಬಿದ್ರೆ, ಬಾಬು ಶೆಟ್ಟಿ , ಯಾವಾಗ ಕಾಮಗಾರಿ ಸಂಪೂರ್ಣಗೊಳ್ಳುತ್ತದೆ ಎಂದು ಸೂಕ್ತ ಉತ್ತರ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದರು. ಪಡುಬಿದ್ರೆಯ ರಸ್ತೆಯನ್ನು ಮಾರ್ಚ್ ಮೊದಲ ವಾರದಲ್ಲಿ ಸಂಪೂರ್ಣ ಮುಕ್ತಾಯಗೊಳಿಸಲಿದ್ದು, ಮಾರ್ಚ್ ಅಂತ್ಯದ ವೇಳೆಗೆ ಕುಂದಾಪುರ ರಸ್ತೆಯನ್ನು ಪೂರ್ಣಗೊಳಿಸಲಾಗುವುದು, ಸರ್ವಿಸ್ ರಸ್ತೆ ಕಾಮಗಾರಿಗಳನ್ನು ಸಹ ಮುಕ್ತಾಯಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಜಿ ಪುತ್ರನ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಮೀತ್ ಶೆಟ್ಟಿ ಕೌಡೂರು, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಾಳಿ, ಕುಂದಾಪುರ ಡಿಎಫ್‍ಓ ಆಶೀಶ್ ರೆಡ್ಡಿ, ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.












