ಉಡುಪಿ: ಜಿಲ್ಲೆಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಸಾರ್ವಜನಿಕರು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.
ಸರ್ಕಾರದ ಆದೇಶದಂತೆ ಹಸಿರು ಪಟಾಕಿಗಳನ್ನು ಬಿಟ್ಟು ಉಳಿದ ಯಾವುದೇ ಪಟಾಕಿಗಳನ್ನು ಮಾರಾಟ ಮಾಡುವಂತಿಲ್ಲ. ಹಸಿರು ಪಟಾಕಿಗಳನ್ನು ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಹಚ್ಚಬೇಕು.
ಸುಡುಮದ್ದು ಮಾರಾಟ ಮಾಡುವ ಮಳಿಗೆಯ ಸುತ್ತಮುತ್ತ ಪ್ರತಿನಿತ್ಯ ಸ್ಯಾನಿಟೈಸೇಷನ್ ಮಾಡಬೇಕು ಹಾಗೂ ಪಟಾಕಿ ಖರೀದಿಗೆ ಬರುವ ಸಾರ್ವಜನಿಕರಿಗೆ ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಕಲ್ಪಿಸಬೇಕು.
ಪಟಾಕಿಗಳನ್ನು ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯ ವರೆಗೆ ಮಾತ್ರ ಮಾರಾಟ ಮಾಡಬೇಕು.
ಪರವಾನಿಗೆ ಅವಧಿ ಮುಗಿದ ನಂತರ ಉಳಿದಿರುವ ಸುಡುಮದ್ದುಗಳನ್ನು ಮನೆಗೆ ಕೊಂಡೊಯ್ಯದೇ ಅವುಗಳನ್ನು ಅಧಿಕೃತ ಸಗಟು ಮಾರಾಟಗಾರರಿಗೆ ಹಿಂದಿರುಗಿಸಬೇಕು.
ಪರವಾನಿಗೆ ಅವಧಿ ನಂತರ ಮಳಿಗೆಯಲ್ಲಿ ಉಳಿದ ತ್ಯಾಜ್ಯವನ್ನು ಸುಡುಮದ್ದುಗಳಿಂದ ಬೇರ್ಪಡಿಸಿ ಕಾಗದ, ಪ್ಲಾಸ್ಟಿಕ್ಗಳನ್ನು ಹತ್ತಿರದ ತ್ಯಾಜ್ಯ ವಿಲೇವಾರಿ ಸಂಗ್ರಹಣಾ ಸ್ಥಳಕ್ಕೆ ಸಾಗಿಸಬೇಕು.
ಈ ಮೆಲ್ಕಂಡ ನಿಯಮ ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯಿದೆ 2005 ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 188ರ ಅಡಿಯಲ್ಲಿ ಶಿಸ್ತಿನ /ಕಾನೂನು ಕ್ರಮ ಮತ್ತು ಅನ್ವಯವಾಗಬಹುದಾದ ಇತರೆ ಕಾನೂನು ಉಪಬಂಧಗಳ ಮೇರೆಗೆ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಎಚ್ಚರಿಕೆ ನೀಡಿದ್ದಾರೆ.