ಉಡುಪಿ: ಮಣಿಪಾಲದ ಅದಿತಿ ಸೌರಭ ಅಪಾರ್ಟ್ ಮೆಂಟ್ ಮೇಲೆ ದಾಳಿ ನಡೆಸಿದ ಪೊಲೀಸರು ₹ 3.89 ಲಕ್ಷ ಮೌಲ್ಯದ 32 ಗ್ರಾಂ ವಿದೇಶಿ ಹೈಡ್ರೊವಿಡ್ ಗಾಂಜಾ, 9 ಗ್ರಾಂ ಬ್ರೌನ್ ಶುಗರ್ ಹಾಗೂ 25 ಎಂಡಿಎಂಎ (MDMA) ಮಾತ್ರೆಗಳನ್ನು ವಶಪಡಿಸಿಕೊಂಡಿದ್ದು, ಇಬ್ಬರು ವೈದ್ಯ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ಮಣಿಪಾಲದ ಅದಿತಿ ಸೌರಭ ಅಪಾರ್ಟ್ ಮೆಂಟ್ ನ ರೂಮ್ ನಂಬರ್ 204 ರಲ್ಲಿ ವಾಸವಾಗಿದ್ದ ಕೆಎಂಸಿ ಮೆಡಿಕಲ್ ಕಾಲೇಜಿನ ವೈದ್ಯ ವಿದ್ಯಾರ್ಥಿ ಆದಿತ್ಯ ಪ್ರಭಾಕರ್ (28) ಬಂಧಿತ ಆರೋಪಿ. ಖಚಿತ ಮಾಹಿತಿ ಆಧಾರದ ಮೇಲೆ ಎಎಸ್ಪಿ ಕುಮಾರ್ ಚಂದ್ರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಶನಿವಾರ ಅಪಾರ್ಟ್ ಮೆಂಟ್ ಮೇಲೆ ದಾಳಿ ನಡೆಸಿದ್ದರು. ಆರೋಪಿ ಆದಿತ್ಯ ಪ್ರಭಾಕರ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಇನ್ನಷ್ಟು ಮಾಹಿತಿ ಕಲೆಹಾಕುತ್ತಿದ್ದಾರೆ. ಪ್ರಕರಣದಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ಭಾಗಿಯಾಗಿರುವ ಶಂಕೆಯಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುವುದು ಬಾಕಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಈಚೆಗೆ ಉಡುಪಿ ಪೊಲೀಸರು ವಶಪಡಿಸಿಕೊಳ್ಳುತ್ತಿರುವ ಸಿಂಥೆಟಿಕ್ ಡ್ರಗ್ಸ್ ಗಳ 4ನೇ ಪ್ರಕರಣ ಇದಾಗಿದೆ.
ಮತ್ತೊಬ್ಬ ವಿದ್ಯಾರ್ಥಿಯ ಬಂಧನ
ಇದೇ ಪ್ರಕರಣಕ್ಕೆ ಸಂಬಂದಿಸಿದಂತೆ ಅಮೇರಿಕಾ ಮೂಲದ ಅನಿವಾಸಿ ಭಾರತೀಯ ವಿದ್ಯಾರ್ಥಿ ಅನಿಶ್ ರಾಜನ್ (22) ಎಂಬಾತನನ್ನು ಇಂದು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆತನನ್ನು ವಿಚಾರಣೆ ಮಾಡಿ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇನ್ನೂ ಹಲವರ ಬಂಧನಕ್ಕೆ ತನಿಖಾ ತಂಡ ಬಲೆ ಬೀಸಿದೆ. ಹಾಗೆಯೇ ಡ್ರಗ್ಸ್ ವಿರುದ್ದ ಕಾರ್ಯಾಚರಣೆ ಇನ್ನೂ ಮುಂದುವರಿಯುತ್ತದೆ ಎಂದು ಎಸ್ಪಿ ವಿಷ್ಣುವರ್ಧನ ತಿಳಿಸಿದ್ದಾರೆ.
ಉಡುಪಿ ಎಸ್ಪಿ ವಿಷ್ಣುವರ್ಧನ ಮಾರ್ಗದರ್ಶನದಲ್ಲಿ ಎಎಸ್ಪಿ ಕುಮಾರ್ ಚಂದ್ರ ನೇತೃತ್ವದ ಕಾರ್ಯಾಚರಣೆ ತಂಡದ ಸದಸ್ಯರಾದ ಉಡುಪಿ ಡಿವೈಎಸ್ಪಿ ಟಿ.ಆರ್. ಜೈ ಶಂಕರ್, ಕುಂದಾಪುರ ಎಎಸ್ಪಿ ಹರಿರಾಮ ಶಂಕರ್, ಮಂಜುನಾಥ್ ಎಂ ಗೌಡ, ಪಿಎಸ್ ಐ ರಾಜಶೇಖರ್, ಉಡುಪಿ ಸಹಾಯಕ ಡ್ರಗ್ಸ್ ಕಂಟ್ರೋಲರ್ ನಾಗರಾಜ್, ಗ್ರಾಮ ಲೆಕ್ಕಾಧಿಕಾರಿಯಾದ ಗಿರೀಶ್ ಗೌರವಗೋಶ್ ಮತ್ತು ಉಪೇಂದ್ರ ಕುಮಾರ್ , ಮಣಿಪಾಲ ಠಾಣೆಯ ಸಿಬ್ಬಂದಿಗಳಾದ ಆದರ್ಶ, ಆನಂದಯ್ಯ , ಸುದೀಪ ಹಾಗೂ ಡಿ ವೈ ಎಸ್ ಪಿ ಕಛೇರಿಯ ಸಿಬ್ಬಂದಿಗಳಾದ ನವೀನ್ ಕುಮಾರ್ ಶಾಂತರಾಂ ಹಾಗೂ ಎಸ್ಪಿ ಕಚೇರಿಯ ಸಿಬ್ಬಂದಿಗಳಾದ ಅಶೋಕ ಪಾಟಕರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.