ನಟ ಸುರೇಂದ್ರ ಬಂಟ್ವಾಳ್ ಕೊಲೆ ಪ್ರಕರಣಕ್ಕೆ ಟ್ವಿಸ್ಟ್: ನಕಲಿ ಪತ್ರಕರ್ತ ಪ್ರತೀಕ್ ಕೋಟ್ಯಾನ್ ಬಂಧನ

ಮಂಗಳೂರು: ನಟ, ರೌಡಿ ಶೀಟರ್ ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣ ಹೊಸ ಟ್ವಿಸ್ಟ್ ಪಡೆದುಕೊಂಡಿದ್ದು, ಇದೀಗ ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿಯ ನಕಲಿ ಪತ್ರಕರ್ತ ಪ್ರತೀಕ್ ಕೋಟ್ಯಾನ್ (28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಸುರೇಂದ್ರ ಬಂಟ್ವಾಳನ ಹತ್ಯೆಯ ಮಾಹಿತಿ ಆರೋಪಿ ಪ್ರತೀಕ್ ಕೋಟ್ಯಾನ್ ಗೆ ಮೊದಲೇ ತಿಳಿದಿತ್ತು ಎನ್ನಲಾಗಿದೆ. ಅಲ್ಲದೆ, ಆತ ವಾಟ್ಸಾಪ್ ಸ್ಟೇಟಸ್ ನಲ್ಲಿ ‘ರೌಡಿಶೀಟರ್ ಕೊಲೆ ಸಾಧ್ಯತೆ ಇದೆ’ ಎಂಬ ಪೋಸ್ಟ್ ಹಾಕಿದ್ದನು.

ಹಾಗೆ ಕೊಲೆ ಪ್ರಕರಣದ ಆರೋಪಿಗಳಾದ ಸತೀಶ್ ಹಾಗೂ ಗಿರೀಶ್ ಎಂಬುವವರನ್ನು ತನ್ನ ಕಾರಿನಲ್ಲೇ ಉಜಿರೆಯ ತೋಟದ ಮನೆಯೊಂದರಲ್ಲಿ ಇರಿಸಿದ್ದನು ಎಂಬ ಮಾಹಿತಿಯೂ ಪೊಲೀಸರಿಗೆ ಸಿಕ್ಕಿದೆ. ಕೊಲೆಯ ಬಳಿಕ ಆರೋಪಿ ಪ್ರತೀಕ್ ಪೊಲೀಸರಿಗೆ ಶರಣಾಗತಿ ಮಾಡುವ ನಾಟಕವಾಡಿ ಆರೋಪಿಗಳಾದ ಸತೀಶ್ ಹಾಗೂ ಗಿರೀಶ್ ನನ್ನು ತನ್ನ ಕಾರಿನಲ್ಲೇ ಕರೆತಂದು ಬಂಟ್ವಾಳದ ಕಲ್ಲಡ್ಕ ಸಮೀಪದ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದನು.

ಬಳಿಕ ಈ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಈ ಮಾಹಿತಿಯನ್ನು ಬಾಯಿಬಿಟ್ಟಿದ್ದರು. ಇದರ ಆಧಾರದ ಮೇಲೆ ಪೊಲೀಸರು ಪ್ರತೀಕ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಮಂಗಳೂರು ಮೂಲದ ರೌಡಿಶೀಟರ್ ಆಕಾಶಭವನ್ ಶರಣ್ ಅಲಿಯಾಸ್ ಶರಣ್ ಪೂಜಾರಿಯನ್ನು ವಿಚಾರಣೆಗಾಗಿ ಪೊಲೀಸರು ಬಾಡಿ ವಾರೆಂಟ್ ಪಡೆದು ಬೆಂಗಳೂರಿಗೆ ತೆರಳಿದ್ದರು.

ಶುಕ್ರವಾರ ಆತನನ್ನು ಜೈಲಿನಿಂದ ಬಂಟ್ವಾಳಕ್ಕೆ ಕರೆ ತರಲಾಗಿದ್ದು, ಇಂದು ಬಂಟ್ವಾಳ ಜೆಎಂಎಫ್ ಕೋರ್ಟ್ ಗೆ ಹಾಜರುಪಡಿಸಿ ಐದು ದಿನಗಳ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಐದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ನೀಡಿದ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದಾರೆ.