ಡಿ.ಕೆ. ಶಿವಕುಮಾರ್ ಮೀರ್ ಸಾಧಿಕ್: ಡಿಸಿಎಂ ಅಶ್ವಥನಾರಾಯಣ

ಬೆಂಗಳೂರು: ಮೈತ್ರಿ ಸರ್ಕಾರವನ್ನು ಪತನಕ್ಕೆ ‘ಮೀರ್‌ ಸಾಧಿಕ್‌’ನಂತೆ ಕೆಲಸ ಮಾಡಿದ್ದು ಡಿ.ಕೆ. ಶಿವಕುಮಾರ್‌. ಇವರ ಜತೆ ಸಿದ್ದರಾಮಯ್ಯ ಸೇರಿ ಎಚ್‌.ಡಿ.ಕುಮಾರಸ್ವಾಮಿಗೆ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಅವರು ಆರೋಪಿಸಿದ್ದಾರೆ.

ಕಾಂಗ್ರೆಸ್‌ ಶಾಸಕರು ಪಕ್ಷ ಬಿಡಲು ಕಾರಣರು ಯಾರು ಎಂಬುದನ್ನು ತಿಳಿಸುವ ಧೈರ್ಯ ಈಗಲಾದರೂ ಶಿವಕುಮಾರ್‌ ಮಾಡಬೇಕು. ಈ ಷಡ್ಯಂತ್ರ ರೂಪಿಸಿದ್ದು ಯಾರು ಎಂಬುದನ್ನು ವಿವರಿಸಲಿ. ಆರ್‌.ಆರ್‌.ನಗರ ಚುನಾವಣೆಯಲ್ಲಿ ಸೋಲಿನ ಸುಳಿವು ಸಿಗುತ್ತಿದ್ದಂತೆ ಮುನಿರತ್ನ ಹಣ ತೆಗೆದುಕೊಂಡು ಬಿಜೆಪಿ ಸೇರಿದರು ಎಂಬುದಾಗಿ ಆರೋಪ ಮಾಡುತ್ತಿದ್ದಾರೆ. ಸೋಲಿನ ಮುಖಭಂಗ ತಪ್ಪಿಸಿಕೊಳ್ಳಲು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಹೊಸ ನಾಟಕ ಆಡುತ್ತಿದ್ದಾರೆ ಎಂದು ಇಂದು ಸುದ್ದಿಗೋಷ್ಠಿಯಲ್ಲಿ‌ ಟೀಕಿಸಿದರು.

ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ವಿರುದ್ಧ ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಸೇರಿ ನಡೆಸಿರುವ ಷಡ್ಯಂತ್ರವೂ ಈಗ ಬಯಲಿಗೆ ಬಂದಿದೆ. ಅದಕ್ಕೆ ಸಂಬಂಧಿಸಿದ ಅವರಿಬ್ಬರ ನಡುವಿನ ಮಾತುಕತೆಯ ಆಡಿಯೋ ದಾಖಲೆ ಇದ್ದು, ಅದನ್ನು ಸಕಾಲದಲ್ಲಿ ಬಿಡುಗಡೆಗೊಳಿಸುವುದಾಗಿ ಅವರು ಹೇಳಿದರು.