ಬೆಂಗಳೂರು: ನಗರದ ನ್ಯಾಯಾಧೀಶರಿಗೆ ಹಾಗೂ ಪೊಲೀಸ್ ಕಮಿಷನರ್ ಕಚೇರಿಗೆ ಬಾಂಬ್ ಬೆದರಿಕೆಯೊಡ್ಡಿ ಪತ್ರ ಬರೆದಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಸೋಮವಾರ ತಡರಾತ್ರಿ ವಶಕ್ಕೆ ಪಡೆದಿದ್ದಾರೆ.
ತುಮಕೂರಿನ ರಾಜಶೇಖರ್ ಹಾಗೂ ವೇದಾಂತ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಕಸ್ಟಡಿಗೆ ಪಡೆದು, ವಿಚಾರಣೆ ನಡೆಸಿದ್ದಾರೆ. ಆಗ ಇದೊಂದು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಉಂಟಾಗಿರುವ ಪ್ರಹಸನ ಎಂದು ಗೊತ್ತಾಗಿದೆ.
ಅತ್ತೆಯ ಆಸ್ತಿ ಹಂಚಿಕೆ ಸಂಬಂಧಿಸಿ ಆರೋಪಿ ರಾಜಶೇಖರ್ ಗೆ ರಮೇಶ್ ವಿರುದ್ಧ ಮನಸ್ತಾಪವಿತ್ತು. ಅದೇ ಕಾರಣಕ್ಕೆ ರಾಜಶೇಖರ್ ಎಂಬಾತನು ವೇದಾಂತ್ ಜತೆ ಸೇರಿಕೊಂಡು ರಮೇಶ್ ಹಾಗೂ ಶಿವಪ್ರಕಾಶ್ ಹೆಸರಿನಲ್ಲಿ ಬೆದರಿಕೆ ಪತ್ರ ಬರೆದಿದ್ದ ಎನ್ನಲಾಗಿದೆ. ಅವರನ್ನು ಜೈಲಿಗೆ ಕಳುಹಿಸುವ ಉದ್ದೇಶದಿಂದ ಪತ್ರ ಬರೆದಿದ್ದ ಎಂದು ಗೊತ್ತಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ನಾಲ್ವರನ್ನು ಕಸ್ಟಡಿಗೆ ಪಡೆದು, ಇನ್ನಷ್ಟು ವಿಚಾರಣೆಗೆ ಒಳಪಡಿಸಿದ್ದಾರೆ.
ಆರೋಪಿಗಳು ಬರೆದ ಪತ್ರದಲ್ಲಿ ಏನಿತ್ತು:
ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ ಹಾಗೂ ಡ್ರಗ್ಸ್ ಪ್ರಕರಣದ ಎಲ್ಲ ಆರೋಪಿಗಳಿಗೆ ಜಾಮೀನು ನೀಡಬೇಕು. ನಿಮಗೆ ಏನು ಬೇಕು ಕೇಳಿ, ಎಲ್ಲ ಕೊಡುತ್ತೇವೆ. ಅದನ್ನು ಬಿಟ್ಟು ಜಾಮೀನು ನಿರಾಕರಿಸಿದರೆ, ನಿಮ್ಮ ಕಾರಿನ ಎಂಜಿನ್‌ಗೆ ಬಾಂಬ್ ಇಟ್ಟು ಸ್ಪೋಟಿಸುತ್ತೇವೆ ಎಂದು ಬೆದರಿಕೆ ಪತ್ರದಲ್ಲಿ ಬರೆಯಲಾಗಿತ್ತು. ನಗರ ಪೊಲೀಸ್ ಕಮಿಷನರ್ ಹಾಗೂ ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲಗೂ ಪತ್ರ ಕಳುಹಿಸಲಾಗಿದೆ. ಇದು, ಮಹಮ್ಮದ್ ಜೈಷಿ ಸಂಘಟನೆ ಎಚ್ಚರಿಕೆ’ ಎಂಬುದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.












