ಬೆಂಗಳೂರು: ಕರ್ನಾಟಕದಲ್ಲಿ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಪಕ್ಷಗಳಿಂದ ಗೆಲುವಿನ ಲೆಕ್ಕಚಾರವೂ ನಡೆಯುತ್ತಿದೆ. ಈ ನಡುವೆ ರಾಜರಾಜೇಶ್ವರಿ ನಗರ (ಆರ್ ಆರ್ ನಗರ) ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಆಘಾತಕಾರಿ ಸುದ್ದಿ ಹೊರಬಿದ್ದಿದೆ.
ನವೆಂಬರ್ 3ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಆರ್ ಆರ್ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಹಾಗೆ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಬಹುದು ಅಥವಾ ಕಡಿಮೆ ಅಂತರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಬಹುದು ಎಂದು ಸರ್ಕಾರದ ಆಂತರಿಕ ಮೌಲ್ಯಮಾಪನದಿಂದ ತಿಳಿದುಬಂದಿದೆ.
ರಾಜರಾಜೇಶ್ವರಿ ನಗರದಲ್ಲಿ ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಮಾಜಿ ಶಾಸಕ ಮುನಿರತ್ನ ನಾಯ್ಡು ಈ ಬಾರಿ ಬಿಜೆಪಿ ಟಿಕೆಟ್ ನಿಂದ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ನಿಂದ ಹೆಚ್. ಕುಸುಮಾ ಎದುರಾಳಿಯಾಗಿದ್ದಾರೆ. ಇಲ್ಲಿ ಬಿಜೆಪಿ 25-30 ಸಾವಿರ ಅಂತರದಿಂದ ಗೆಲುವು ಸಾಧಿಸಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಶಿರಾದಲ್ಲಿ ಕಾಂಗ್ರೆಸ್ ಪಕ್ಷದ ಟಿ. ಬಿ. ಜಯಚಂದ್ರ ಮತ್ತು ಬಿಜೆಪಿಯ ರಾಜೇಶ್ ಗೌಡ ನಡುವೆ ನೇರ ಹೋರಾಟ ಇರಲಿದೆ ಎಂದು ಹೇಳಲಾಗಿದೆ.
ಶಿರಾದಲ್ಲಿ ಈವರೆಗೆ ನಡೆದ ಚುನಾವಣೆಗಳಲ್ಲಿ ಬಿಜೆಪಿ 17 ಸಾವಿರ ಮತಗಳನ್ನು ದಾಟಿಲ್ಲ. ಆದರೆ ಈ ಬಾರಿ ಸರ್ಕಾರದ ನೆರವು ಹಾಗೂ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರ ಪ್ರಚಾರದ ಕೊರತೆಯಿಂದ ಬಿಜೆಪಿಗೆ ವರದಾನವಾಗಬಹುದು. ಜೆಡಿಎಸ್ ಪಕ್ಷದ ಸಾಂಪ್ರಾದಾಯಿಕ ಮತಗಳು ರಾಜೇಶ್ ಗೌಡ ಅವರಿಗೆ ಬೀಳುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತುತ ಸ್ಥಿತಿಯಲ್ಲಿ ಶಿರಾದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಹಿನ್ನಡೆ ಉಂಟಾಗಲಿದೆ. ಶಿರಾ ಜೊತೆಗೆ ವಿಲೀನಕ್ಕೂ ಮುನ್ನ ಕಳ್ಳಂಬೆಳ್ಳಾ ಕ್ಷೇತ್ರದಿಂದ ನಾಲ್ಕು ಬಾರಿ ಗೆಲುವು ಸಾಧಿಸಿದ್ದ ಟಿ. ಬಿ. ಜಯಚಂದ್ರ ವಿರುದ್ಧ ವಿರೋಧಿ ಅಲೆ ಎಂಬುದು ಬಿಜೆಪಿ ಪ್ರಚಾರಕರು ಅಭಿಪ್ರಾಯಪಟ್ಟಿದ್ದಾರೆ.