ಉಡುಪಿ: ಮಾಸ್ಕ್ ಧರಿಸದಿದ್ದ ಸರ್ಕಾರಿ ಬಸ್ ಕಂಡಕ್ಟರ್ ಒಬ್ಬರಿಗೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಇಂದು ದಂಡ ವಿಧಿಸಿ, ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಗರದ ಕೋರ್ಟ್ ರಸ್ತೆಯ ಸಮೀಪ ನಡೆದಿದೆ.
ಡಿಸಿಯವರು ಉಡುಪಿ ಜಿಲ್ಲಾ ನ್ಯಾಯಾಲಯದ ಅವರಣದಲ್ಲಿ ಇಂದು ನಡೆದ ಕೋವಿಡ್ ಜನಾಂದೋಲನ ಮಾಹಿತಿ ಕಾರ್ಯಕ್ರಮದ ನಂತರ, ಸಮೀಪದ ವಸತಿ ಸಂಕೀರ್ಣದ ಮನೆಗೆ “ನನ್ನ ಕುಟುಂಬ ನನ್ ಜವಾಬ್ದಾರಿ” ಅಭಿಯಾನ ಕಾರ್ಯಕ್ರಮದ ಸ್ಟಿಕರ್ ಅಳವಡಿಸಿ ಹೊರಬರುತ್ತಿದ್ದರು.
ಈ ವೇಳೆ ರಸ್ತೆ ದಾಟುವಾಗ ಮುಂದೆ ಹಾದು ಹೋದ ಸರ್ಕಾರಿ ಬಸ್ನಲ್ಲಿ ಬಸ್ ಮುಂದುಗಡೆ ಕುಳಿತಿದ್ದ ಕಂಡಕ್ಟರ್ ಮಾಸ್ಕ್ ಧರಿಸದೇ ಕುಳಿತಿರುವನ್ನು ಗಮನಿಸಿದ್ದಾರೆ. ಕೂಡಲೇ ಬಸ್ ನಿಲ್ಲಿಸುವಂತೆ ಸೂಚಿಸಿ, ಕಂಡಕ್ಟರ್ಗೆ ತಕ್ಷಣ ಸ್ಥಳದಲ್ಲೇ ದಂಡ ವಿಧಿಸುವಂತೆ ಸ್ಥಳದಲ್ಲಿದ್ದ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಸ್ ನಲ್ಲಿ ಮಾಸ್ಕ್ ಧರಿಸದೆ ಪ್ರಯಾಣಿಸುತ್ತಿದ್ದ ಇತರೆ ಪ್ರಯಾಣಿಕರಿಗೂ ದಂಡ ವಿಧಿಸುವಂತೆ ಸೂಚಿಸಿದರು. ತಾನು ಮಾಸ್ಕ್ ಹಾಕದೆ, ಪ್ರಮಾಣಿಕರಿಗೂ ಮಾಸ್ಕ್ ಹಾಕಲು ಸೂಚಿಸದ ಕಂಡಕ್ಟರ್ ಅನ್ನು ಜಿಲ್ಲಾಧಿಕಾರಿ ತೀವ್ರ ತರಾಟೆಗೆ ತೆಗೆದುಕೊಂಡರು.












