ಉಡುಪಿ ಸೀರೆಗಳ ವಿನ್ಯಾಸದಲ್ಲಿ ನಾವು ಯಾರ ಸಹಾಯವನ್ನೂ ಪಡೆದಿಲ್ಲ: ತಾಳಿಪಾಡಿ ನೇಕಾರರ ಸಂಘ ಸ್ಪಷ್ಟನೆ

ಉಡುಪಿ:ಇತ್ತೀಚಿಗೆ  ಕೆಲವು ದೂರದರ್ಶನ ವಾಹಿನಿಗಳಲ್ಲಿ ಮತ್ತು ಸುದ್ದಿ ಪತ್ರಿಕೆಗಳಲ್ಲಿ ಉಡುಪಿ ಸೀರೆ ಬಗ್ಗೆ ಬಂದ ಕೆಲವು ಸುದ್ದಿಗಳ ಕುರಿತು  ಸಭೆ ನಡೆಸಿ ನಾವು  ಈ ಮೂಲಕ ಸೃಷ್ಟಿಕರಣ ನೀಡುತ್ತಿದ್ದೇವೆ.
ನಮ್ಮ ಸಂಘದ ಜೊತೆಗೆ ಕಳೆದ ಎರಡುವರೆ ವರುಷಗಳಿಂದ ಕಾರ್ಕಳದ ಕದಿಕೆ ಟ್ರಸ್ಟ್ ಉಡುಪಿ ಸೀರೆ ಪುನಸ್ಚೇತನ ಕಾರ್ಯವನ್ನು ನಡೆಸುತ್ತಿದ್ದು ಇದರಿಂದ ಸಂಘದಲ್ಲಿ  ಬಹಳಷ್ಟು  ಬೆಳವಣಿಗೆ ಆಗಿದೆ.
ನೇಕಾರರಿಗೆ ತರಬೇತಿ, ವೃತ್ತಿ ಬಿಟ್ಟು ಹೋದ ನೇಕಾರರನ್ನು ಮತ್ತೆ ಕರೆಸಿ ಅವರು ಮತ್ತೆ ನೇಕಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವಲ್ಲಿ ಕದಿಕೆ ಟ್ರಸ್ಟ್ ನವರ ಶ್ರಮವು ತುಂಬಾ ಇದೆ. ಕದಿಕೆ ಟ್ರಸ್ಟ್ ನವರ ಉತ್ತಮ ಪ್ರೋತ್ಸಾಹದಿಂದ 8 ಜನ ನೇಕಾರರಿದ್ದ ಈ ಸಂಘದಲ್ಲಿ ಈಗ 24 ಜನ ನೇಕಾರರು ಇದ್ದಾರೆ.
ಅನೇಕ ಮಂದಿ ಹಲವು ವರುಷಗಳಿಂದ  ನಮ್ಮಲ್ಲಿ ಅವರಿಗೆ ಬೇಕಾದ ರೀತಿಯಲ್ಲಿ ಸೀರೆ ವಿನ್ಯಾಸ ಮಾಡಿಸಿ ಕೊಂಡುಹೋಗುತ್ತಿದ್ದಾರೆ. ಆದರೆ  ಯಾರಿಂದಲೂ ಆಗಲಿ  ಸೀರೆಗಳ  ವಿನ್ಯಾಸದಲ್ಲಿ  ನಾವು ಸಹಾಯವನ್ನು ಪಡೆದಿಲ್ಲ ಎಂದು ತಾಳಿಪಾಡಿ ನೇಕಾರರ ಸಂಘ ಕಿನ್ನಿಗೋಳಿ ಸ್ಪಷ್ಟನೆ ನೀಡಿದೆ.
ಕದಿಕೆ ಟ್ರಸ್ಟ್ ನ ಸಹಕಾರ:
ನೇಕಾರರಿಗೆ ವೈದ್ಯಕೀಯ ಸಹಾಯ, ಮಗ್ಗದ ಶೆಡ್ ಕಟ್ಟಲು ಸಹಾಯ, ಮೂರು ತಿಂಗಳಿಗೊಮ್ಮೆ ಉತ್ತಮ ನೇಕಾರರನ್ನು ಗುರುತಿಸಿ ಅವರಿಗೆ ಸನ್ಮಾನ, ಪರಿಸರ ಸ್ನೇಹಿ ಬಣ್ಣದ ತರಬೇತಿ ಕೊಟ್ಟು ಆ ಮೂಲಕ ಸಹಜ ಬಣ್ಣದ ಸೀರೆ ಉತ್ಪಾದಿಸಿ ನೇಕಾರರಿಗೆ ಹೆಚ್ಚಿನ ಆದಾಯ ಸಿಗುವಂತೆ ಕದಿಕೆ ಟ್ರಸ್ಟ್ ನವರು ಮಾಡಿದ್ದಾರೆ. ಹಲವು ದಾನಿಗಳ ಮೂಲಕ 10 ಮಗ್ಗ ಖರೀದಿಗೆ ಸಹಾಯ ಮಾಡಿದ್ದು, GI ಟ್ಯಾಗ್ ಬಳಸಲು ಅನುಮತಿ ದೊರಕಿಸಲು ಸಹಾಯ ಮಾಡಿದ್ದು ಕದಿಕೆ ಟ್ರಸ್ಟ್ ನವರು.
 ಮುಂದಿನ ದಿನದಲ್ಲಿ ಇನ್ನು 5 ಜನಕ್ಕೆ ನೇಯ್ಗೆ ತರಬೇತಿ, ಎಂಬ್ರಾಯಿಡರ್ ತರಬೇತಿ, ಓಜೋಪ್ರೀ ಬಣ್ಣದ ತರಬೇತಿ ಇತ್ಯಾದಿ ಹಲವು ತರಬೇತಿ  ಕೊಟ್ಟು ನಮ್ಮಲ್ಲಿ ಅದನ್ನು ಬಳಸುವಂತೆ ಮಾಡುವುದು, ಸಹಜ ಬಣ್ಣದ ಯೂನಿಟ್ ನಮ್ಮಲ್ಲಿ ಪ್ರಾರಂಭಿಸುವುದು, ನೇಕಾರರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ, ಆ ಮೂಲಕ ನೇಕಾರರ ತುರ್ತು ಅಗತ್ಯಗಳಿಗೆ ಸಹಾಯ ಮಾಡುವುದು ಹಾಗೂ ಸಂಘದಲ್ಲಿ ನೇಯ್ಗೆ ಮಾಡುವವರಿಗೆ ಮಳೆಗಾಲದಲ್ಲಿ ಬೆಳಕಿನ ತೊಂದರೆ ಆಗುತ್ತಿರುವುದರಿಂದ ಸೆಲ್ಕೋ ಸೋಲಾರ್ ಕಂಪೆನಿ ಮೂಲಕ ಬೆಳಕಿನ ವ್ಯವಸ್ಥೆ ಮಾಡಿಕೊಡುವುದು ಮುಂತಾದ ಯೋಜನೆಯನ್ನು ಸಿದ್ದಪಡಿಸಿ ಅದಕ್ಕೋಸ್ಕರ ಕೆಲಸ ಮಾಡುತ್ತಿದ್ದಾರೆ.
ಪ್ರಖ್ಯಾತ ವಿನ್ಯಾಸಕಾರರ ಸಹಾಯದಿಂದ ಸೀರೆ ಲೋಗೋ ವಿನ್ಯಾಸ
GI ಉಲ್ಲೇಖಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಹೊಸ ವಿನ್ಯಾಸ ಮಾಡಲು ಕದಿಕೆ ಟ್ರಸ್ಟ್  ನಮಗೆ ಸಹಾಯ ಮಾಡಿದೆ. ಪ್ರಖ್ಯಾತ ವಿನ್ಯಾಸಕಾರರ  ನೆರವಿನಿಂದ ನಮ್ಮ ಸೀರೆಗೆ ಲೋಗೋ ಮತ್ತು ನೇಕಾರರ ಹೆಸರು ಮತ್ತು ಫೋಟೋ ಇರುವ ಬ್ಯಾಂಡ್ ಮಾಡಿಸಿ ಕೊಟ್ಟಿರುತ್ತಾರೆ. ಇದರಿಂದ ಗ್ರಾಹಕರಿಗೆ ನೇಕಾರರ ಬಗ್ಗೆ ಅರಿಯಲು ಸಹಾಯವಾಗಿದೆ.
ಸಾಮಾಜಿಕ ಜಾಲತಾಣಗಳ ಮೂಲಕ ಉಡುಪಿ ಸೀರೆ ಮತ್ತು ನೇಕಾರರ ಬಗ್ಗೆ ವ್ಯಾಪಕ ಪ್ರಚಾರ ನೀಡಿ ದೇಶಾದ್ಯಾಂತ  ಮಾರುಕಟ್ಟೆ ಕಲ್ಪಿಸಿ ಕೊಟ್ಟಿದ್ದಾರೆ. ಆನ್ಲೈನ್ ಮೂಲಕ ಮಾರಾಟ ಮಾಡಲು ನಮಗೆ ಸಹಾಯ ಮಾಡುತ್ತಿದ್ದಾರೆ. ಈಗ ಸ್ಥಳೀಯರು ಕೂಡ  ಉಡುಪಿ ಕೈಮಗ್ಗ ಸೀರೆ ತೆಗೆದುಕೊಳ್ಳಲು ಮತ್ತು ನೇಕಾರಿಕೆಯಲ್ಲಿ ತೊಡಗಿಸಿಕೊಳ್ಳಲು ಹೆಚ್ಚೆಚ್ಚು ಆಸಕ್ತಿವಹಿಸುತ್ತಿದ್ದಾರೆ.
ಕೖೆಮಗ್ಗ ಮತ್ತು ಜವಳಿ ಇಲಾಖೆಯವರು   ವಿವಿಧ ಯೋಜನೆಗಳ ಮೂಲಕ ಕೈಮಗ್ಗ ನೇಕಾರರಿಗೆ ನೀಡುತ್ತಿರುವ ಪ್ರೋತ್ಸಾಹ  ಮತ್ತು ಕದಿಕೆ ಟ್ರಸ್ಟ್ ನ  ವಿವಿಧ ಯೋಜನೆಗಳಿಂದ  ನಮ್ಮಲ್ಲಿ ಬಹಳಷ್ಟು  ಅಭಿವೃದ್ಧಿ ಆಗಿದೆ ಎಂದು ತಾಳಿಪಾಡಿ ನೇಕಾರರ ಸಂಘ ಪ್ರಕಟನೆಯಲ್ಲಿ ಹೇಳಿದೆ