ಉಡುಪಿ: ಬ್ರಹ್ಮಾವರದ ಸೇವಾಸಿಂಧು ಕಚೇರಿಗೆ ಖಾಸಗಿ ಬಸ್ಸು ನುಗ್ಗಿದ್ದು, ಭಾರೀ ಅನಾಹುತ ಕೂದಲೆಳೆ ಅಂತರದಲ್ಲಿ ತಪ್ಪಿದೆ.
ತಾಂತ್ರಿಕ ದೋಷದಿಂದ ಬಸ್ ಬ್ರಹ್ಮಾವರ ನಿಲ್ದಾಣದಲ್ಲಿ ನಿಂತಿತ್ತು. ಬಸ್ ಸ್ಟಾರ್ಟ್ ಆಗದಿದ್ದಾಗ ಸಿಬ್ಬಂದಿ ಹಿಂದಿನಿಂದ ತಳ್ಳಿಕೊಂಡು ಹೋಗಿದ್ದರು. ಈ ವೇಳೆ ಇಳಿಜಾರಾದ ರಸ್ತೆಯಲ್ಲಿ ಬಸ್ ವೇಗವಾಗಿ ಚಲಿಸಿದ್ದು, ಮುಂಭಾಗದಲ್ಲಿದ್ದ ತಾಲೂಕು ಪಂಚಾಯತ್ ಕಟ್ಟಡದತ್ತ ಸಾಗಿದೆ. ಬಸ್ ನಲ್ಲಿ ಚಾಲಕನಿದ್ದರೂ ತಾಂತ್ರಿಕ ದೋಷದಿಂದ ಬ್ರೇಕ್ ಹಾಕಿದರೂ ಬಸ್ ನಿಯಂತ್ರಣಕ್ಕೆ ಬರಲಿಲ್ಲ. ಹೀಗಾಗಿ ಸೇವಾ ಸಿಂಧು ಕಚೇರಿಗೆಯೊಳಗೆ ನುಗ್ಗಿದೆ.
ಬಸ್ ಡಿಕ್ಕಿ ಹೊಡೆದ ಪರಿಣಾಮ ಕಟ್ಟಡದ ಮುಂಭಾಗಕ್ಕೆ ಹಾನಿಯಾಗಿದ್ದು, ಕಚೇರಿಯ ಒಳಗಿದ್ದ ಕಂಪ್ಯೂಟರ್ ಕೂಡ ಹಾನಿಗೀಡಾಗಿದೆ. ಇಂದು ಭಾನುವಾರ ಆಗಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ. ಇಲ್ಲದಿದ್ದರೆ ಸೇವಾ ಸಿಂಧು ಕಚೇರಿಯಲ್ಲಿ ಆಧಾರ್ ತಿದ್ದುಪಡಿ ಮುಂತಾದ ಕಾರ್ಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಬರುತ್ತಿದ್ದರು.