ಉಡುಪಿ: ಕೋವಿಡ್ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದಾದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣದ ಮೂಲಕ ವ್ಯಾಪಕ ಪ್ರಚಾರ ಮಾಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್ ಅಧಿಕಾರಿಗಳಿಗೆ ತಿಳಿಸಿದರು.
ಅವರು ಇಂದು ವಾರ್ತಾ ಇಲಾಖೆಯ ಆಯುಕ್ತರು, ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಮಾತನಾಡಿದರು.
ಸರ್ಕಾರವು ಕೊರೊನಾ ನಿಯಂತ್ರಣಕ್ಕೆ ಜಾರಿಗೊಳಿಸಿರುವ ನಿಯಮಾವಳಿಗಳ ಅರಿವು ಮೂಡಿಸುವ ಕಾರ್ಯ ತಳಮಟ್ಟದಿಂದ ಆಗಬೇಕಿದೆ ಎಂದರು. ಮಾಧ್ಯಮಗಳು ಸೇರಿದಂತೆ ಎಲ್ಲಾ ರೀತಿಯ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು, ಸಾರ್ವಜನಿಕ ಸ್ಥಳಗಳಲ್ಲಿ ವ್ಯಾಪಕ ಪ್ರಚಾರಗಳನ್ನು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ನಡೆಸಬೇಕು ಎಂದು ಸೂಚನೆ ನೀಡಿದರು.
ವಾರ್ತಾ ಇಲಾಖೆಯ ಆಯುಕ್ತರಾದ ಡಾ. ಪಿ. ಹರ್ಷ ಅವರು ಮಾತನಾಡಿ, ಕೋವಿಡ್ ಸೋಂಕು ತಡೆಯಲು ಕೋವಿಡ್ನ ಸರಳ ಮಾರ್ಗಸೂಚಿಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಮತ್ತಿತರ ಕ್ರಮಗಳ ಬಗ್ಗೆ ಸ್ಥಳೀಯ ಕೇಬಲ್ ನೆಟ್ವರ್ಕ್ ನಲ್ಲಿ ಪ್ರಸಾರ ಮಾಡುವುದರಿಂದ ಹೆಚ್ಚು ಪರಿಣಾಮಕಾರಿಯಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವ ಹಾಗೆ ಪ್ರಚಾರ ಮಾಡಬಹುದಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಕೋವಿಡ್ ಬಗ್ಗೆ ಸುಳ್ಳು ಸುದ್ದಿಗಳು ಹರಡುತ್ತಿವೆ. ಅವುಗಳ ಬಗ್ಗೆ ಸ್ಪಷ್ಟೀಕರಣ ನೀಡುವುದರ ಜೊತೆಗೆ ಕೋವಿಡ್ ಉತ್ತಮ ಮಟ್ಟದ ಚಿಕಿತ್ಸೆ ನೀಡಲು ಅನೇಕ ಅಭಿವೃಧ್ದಿ ಕಾರ್ಯಗಳೂ ಸೇರಿದಂತೆ, ವೈದ್ಯರೊಂದಿಗೆ ಅಧುನಿಕ ತಂತ್ರಜ್ಞಾನಗಳ ಬಳಕೆಯಿಂದ ಬೆರಳ ತುದಿಯಲ್ಲಿಯೇ ಮೊಬೈಲ್ ಮೂಲಕ ಉಚಿತ ಆರೋಗ್ಯ ನೆರವು ಪಡೆಯಬಹುದು ಎಂದು ತಿಳಿಸಿದರು.
ವೀಡಿಯೋ ಸಂವಾದದಲ್ಲಿ ಆರೋಗ್ಯ ಇಲಾಖೆಯ ಆಯುಕ್ತರಾದ ಪಂಕಜ್ ಕುಮಾರ್ ಪಾಂಡೆ, ಆರೋಗ್ಯ ಅಭಿಯಾನ ನಿರ್ದೇಶಕಿ ಅರುಂಧತಿ, ಜಿಲ್ಲಾಧಿಕಾರಿ ಜಿ.ಜಗದೀಶ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ನವೀನ್ ಭಟ್, ಡಿಹೆಚ್ಓ ಡಾ. ಸುಧೀರ್ ಚಂದ್ರ ಸೂಡಾ, ಕೋವಿಡ್ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ವಾಸುದೇವ್ ಮತ್ತಿತರರು ಉಪಸ್ಥಿತರರಿದ್ದರು.