ಕುಂದಾಪುರ: ಕಳೆದ ನಾಲ್ಕು ವರ್ಷಗಳ ಹಿಂದೆ ಗಂಗೊಳ್ಳಿಯ ತ್ರಾಸಿ ಎಂಬಲ್ಲಿ ಶೀಲ ಶಂಕಿಸಿ ಪತ್ನಿಗೆ ಚೂರಿ ಇರಿದು ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪತಿಗೆ ಕುಂದಾಪುರದ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ 7 ವರ್ಷಗಳ ಜೈಲು ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಮೂಲತಃ ಗಂಗೊಳ್ಳಿ ತ್ರಾಸಿಯ ಚಂದ್ರ ಪೂಜಾರಿ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತನು ಪತ್ನಿಯೊಂದಿಗೆ ಪೂನಾದಲ್ಲಿ ವಾಸಿಸುತ್ತಿದ್ದನು. ಪತ್ನಿ ಚೊಚ್ಚಲ ಹೆರಿಗೆಗೆ ಊರಿಗೆ ಬಂದಿದ್ದಳು. ಆ ನಂತರ ಪತ್ನಿಯ ಮೇಲೆ ಚಂದ್ರ ಪೂಜಾರಿಗೆ ಅನುಮಾನ ಹುಟ್ಟಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಆತ ಪದೇ ಪದೇ ಊರಿಗೆ ಬಂದು ಚಿತ್ರಹಿಂಸೆ ನೀಡುತ್ತಿದ್ದನು.
2016ರ ಫೆಬ್ರವರಿ 19ರಂದು ಗಂಗೊಳ್ಳಿ ತ್ರಾಸಿ ಚರ್ಚ್ ರಸ್ತೆಯ ಜಂಕ್ಷನ್ ಬಳಿ ಪತ್ನಿಯನ್ನು ಅಡ್ಡಗಟ್ಟಿ ಆಕೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದ. ಗಾಯಾಳು ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಅಂದಿನ ಗಂಗೊಳ್ಳಿ ಪಿಎಸ್ಐ ಸುಬ್ಬಣ್ಣ ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಆರೋಪಿ ಬಳಿಕ ಕೋರ್ಟ್ ನಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದನು.
ಸಾಕ್ಷ್ಯಾಧಾರಗಳ ವಿಚಾರಣೆ ನಡೆಸಿದ ನ್ಯಾಯಾಧೀಶ ನರಹರಿ ಪ್ರಭಾಕರ್ ಮರಾಠೆ ಆರೋಪಿ ಚಂದ್ರ ಪೂಜಾರಿ ದೋಷಿಯೆಂದು ತೀರ್ಮಾನಿಸಿ, ಈ ಮೇಲಿನಂತೆ ಶಿಕ್ಷೆಯನ್ನು ಪ್ರಕಟಿಸಿದರು. ಸಂತ್ರಸ್ತ ಪತ್ನಿಗೆ 20 ಸಾವಿರ ಪರಿಹಾರ ನೀಡಲು ಆದೇಶಿಸಿದ್ದಾರೆ.
ಪ್ರಾಸಿಕ್ಯೂಶನ್ ಪರ ಉಡುಪಿ ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಬೇಳೂರು ವಾದ ಮಂಡಿಸಿದ್ದರು.