ಸುಳ್ಳದಲ್ಲಿ ಬೆಳ್ಳಂಬೆಳಿಗ್ಗೆ ಶೂಟೌಟ್: ಬಿಜೆಪಿ ಮುಖಂಡನ ಹತ್ಯೆ ಆರೋಪಿಯನ್ನು ಗುಂಡಿಕ್ಕಿ ಕೊಲೆ

ಸುಳ್ಯ: ಸುಳ್ಯದ ಶಾಂತಿನಗರ ಎಂಬಲ್ಲಿ ಇಂದು ಬೆಳ್ಳಂಬೆಳ್ಳಗ್ಗೆ ಗುಂಡಿನ ಸದ್ದು ಮೊಳಗಿದ್ದು, ಬಿಜೆಪಿ‌ ಮುಖಂಡ ಬಾಲಚಂದ್ರ ಕಳಗಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಸಂಪತ್ ಎಂಬಾತನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆಗೈದಿದ್ದಾರೆ.

ಸುಳ್ಯ ಶಾಂತಿನಗರದ ನಿವಾಸಿಯಾದ ಸಂಪತ್ ಇಂದು ಬೆಳಿಗ್ಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡ ಗುಂಡು ಹಾರಿಸಿ ಆತನನ್ನು ಕೊಲೆ ಮಾಡಿದೆ ಎಂದು ಹೇಳಲಾಗುತ್ತಿದೆ.

ಬಾಲಚಂದ್ರ ಕಳಗಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬ ಕಾರಣಕ್ಕೆ ದುಷ್ಕರ್ಮಿಗಳು ಸಂಪತ್ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಇಂದು ಮುಂಜಾನೆ 6 ಗಂಟೆ ಸುಮಾರಿಗೆ ಸಂಪತ್ ತನ್ನ ನಿವಾಸದಿಂದ ಕಾರಿನಲ್ಲಿ ತೆರಳುತ್ತಿದ್ದ ವೇಳೆ ದಿಢೀರ್ ಬಂದ ದುಷ್ಕರ್ಮಿಗಳ ತಂಡ ಗುಂಡಿನ ದಾಳಿ ನಡೆಸಿದೆ. ಈ ವೇಳೆ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಾಂಪೌಂಡ್ ಡಿಕ್ಕಿ ಹೊಡೆದು ನಿಂತಿದೆ. ಅಲ್ಲಿಂದ ತಪ್ಪಿಕೊಂಡು‌ ಸಂಪತ್ ಸಮೀಪದಲ್ಲಿರುವ ಮನೆಯೊಳಗೆ ಓಡಿ ಹೋಗಿದ್ದಾರೆ. ಈ ವೇಳೆ ಹಿಂಬಾಲಿಸಿಕೊಂಡು ಹೋದ ದುಷ್ಕರ್ಮಿಗಳು ಸಂಪತ್ ಮೇಲೆ ಶೂಟೌಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಗುಂಡೇಟಿನಿಂದ ತೀವ್ರ ಗಾಯಗೊಂಡಿದ್ದ ಸಂಪತ್ ನನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.