ಉಡುಪಿ: ಇಲ್ಲಿನ ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸುವ ಯೋಜನೆಗೆ ಈಗಾಗಲೇ ಆರ್ಥಿಕ ಇಲಾಖೆ ಒಪ್ಪಿಗೆ ಸೂಚಿಸಿದ್ದು, ಸಚಿವ ಸಂಪುಟ ಸಭೆಯ ಒಪ್ಪಿಗೆಯಷ್ಟೇ ದೊರೆಯಬೇಕಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಮಂಡಿಸಿ ಒಪ್ಪಿಗೆ ಪಡೆದು ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು ಎಂದು ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಸಂಬಂಧ ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸಿರುವಂತೆ ಹಾಗೂ ಈ ಹಿಂದೆ ಮುಖ್ಯಮಂತ್ರಿಯವರು ಆಯವ್ಯಯದ ಮೇಲೆ ಉತ್ತರಿಸುವಾಗ ನಮ್ಮ ಬೇಡಿಕೆಯಂತೆ ಉಡುಪಿ ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಭರವಸೆಯನ್ನು ನೀಡಿರುತ್ತಾರೆ. ಅದರಂತೆ ಉಡುಪಿ ಜಿಲ್ಲಾ ಆಸ್ಪತ್ರೆಯನ್ನು 250 ಬೆಡ್ ಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಕಟ್ಟಡ ಹಾಗೂ ಕಲ್ಪಿಸ ಬೇಕಾದ ಸೌಲಭ್ಯಗಳು ಕುರಿತ ಸಂಪೂರ್ಣ ವರದಿಯನ್ನಾದರಿಸಿದ ರೂ. 150 ಕೋಟಿ ಯೋಜನೆಯ ಪ್ರಸ್ತಾವನೆಗೆ ಈಗಾಗಲೇ ಆರ್ಥಿಕ ಇಲಾಖೆ ಒಪ್ಪಿಗೆಯನ್ನು ನೀಡಿರುತ್ತದೆ.
ಈ ಯೋಜನೆಯ ಪ್ರಸ್ತಾವನೆ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅನುಮೋದನೆಗೊಳ್ಳಲು ಬಾಕಿಯಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲಾಗುವುದು. ಆದ್ದರಿಂದ ಉಡುಪಿ ಜಿಲ್ಲಾ ಆಸ್ಪತ್ರೆ ಮೇಲ್ದರ್ಜೆಗೇರಿಸುವ ಸಂಬಂಧ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹವನ್ನು ಕೈಗೊಂಡವರು ತಮ್ಮ ಪ್ರತಿಭಟನೆಯನ್ನು ವಾಪಾಸು ಪಡೆಯುವಂತೆ ಶಾಸಕರು ವಿನಂತಿಸಿದ್ದಾರೆ.