ಕಾರ್ಕಳ: ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದ ಬಹಳಷ್ಟು ಮಂದಿಗೆ ಭೂಮಿಯ ಹಕ್ಕುಪತ್ರಗಳನ್ನು ಹಾಗೂ ಹಕ್ಕುಗಳನ್ನು ನೀಡಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ 9 ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಇದೆ ಎಂದು ಗುರುತಿಸಲಾಗಿದ್ದು, ಇದೀಗ ನಡೆಸಿರುವ ಪುನರ್ ಪರಿಶೀಲನೆಯಿಂದ 6 ಲಕ್ಷ ಹೆಕ್ಟೇರ್ ಪ್ರದೇಶವನ್ನು ಆ ವ್ಯಾಪ್ತಿಯಿಂದ ಕೈಬಿಡಲು ನಿರ್ಧರಿಸಲಾಗಿದೆ ಎಂದು ಹಿಂದು ಧಾರ್ಮಿಕ ದತ್ತಿ ಇಲಾಖೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕಾರ್ಕಳ ಪ್ರವಾಸಿ ಬಂಗಲೆಯಲ್ಲಿ ಮಂಗಳವಾರ ಕಾರ್ಕಳ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘ ಆಯೋಜಿಸಿದ ಸಂವಾದ ಹಾಗೂ ಮಣಿಪಾಲ ಹೆಲ್ತ್ ಕಾರ್ಡ್ ವಿತರಿಸಿ ಮಾತನಾಡಿದರು.
ಇದರಿಂದ ಜನಸಾಮಾನ್ಯರ ಪಾಲಿಗೆ ವರದಾನವಾಗಲಿದೆ. ಉಡುಪಿ ಜಿಲ್ಲೆಯೊಂದರಲ್ಲಿಯೇ 34 ಸಾವಿರ ಹೆಕ್ಟೇರ್ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಿಂದ ಕೈಬಿಡಲಾಗಿದೆ ಎಂದು ತಿಳಿಸಿದರು.
25 ಆಯ್ದ ದೇವಾಲಯಗಳಲ್ಲಿ ಗೋಶಾಲೆಗಳನ್ನು ಆರಂಭಿಸಲು ಸರಕಾರ ಚಿಂತನೆ ನಡೆಸಿದೆ. ಗೋಶಾಲೆ ನಿರ್ಮಾಣಕ್ಕೆ 10 ಎಕರೆ ಜಾಗವನ್ನು ಮಿಸಲಿಡಲು ಸೂಚನೆ ನೀಡಲಾಗಿದೆ. ಸುಬ್ರಹ್ಮಣ್ಯದ ಎರಡು ಕಡೆಗಳಲ್ಲಿ ಗೋಮಾಳಕ್ಕಾಗಿ ಜಾಗವನ್ನು ಗುರುತಿಸಲಾಗಿದೆ. ಕೊಲ್ಲೂರಿನಲ್ಲಿ ಜಾಗ ಮೀಸಲಿಡುವ ಕಾರ್ಯ ಪ್ರಗತಿಯಲ್ಲಿ ಇದೆ ಎಂದರು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಣ್ಣ ಪ್ರಮಾಣದಲ್ಲಿ ಮರಳು ಸಂಗ್ರಹಿಸುವ ಅವಕಾಶವನ್ನು ಗ್ರಾಮ ಪಂಚಾಯತ್ಗೆ ನೀಡಲಾಗಿದೆ. ಯುನಿಟ್ಯೊಂದಕ್ಕೆ ರೂ.3೦೦ ದರ ನಿಗದಿ ಪಡಿಸಲಾಗಿದೆ. ಹೊಳೆ, ನದಿಗಳಲ್ಲಿ ಮರಳು ಗಣಿಗಾರಿಕೆಗೆ ಎಂಎಸ್ಐಎಲ್ ಮೂಲಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮರಳುಗಾರಿಕೆ ಸಮಸ್ಯೆ ಶೇ. ನೂರಕ್ಕೆ ನೂರರಷ್ಟು ಬಗೆಹರಿಸಲು ಸಾಧ್ಯವಾಗದೇ ಹೋದರೂ ಸಾಕಷ್ಟು ಮಟ್ಟದಲ್ಲಿ ಬಗೆಹರಿಸುವಲ್ಲಿ ಸರಕಾರ ಸಫಲವಾಗಿದೆ ಎಂದರು.
ಕುಮ್ಕಿ, ಕಾನ, ಬಾಣೆಯ ಜಾಗದ ಹಕ್ಕು ನೀಡಲು ವ್ಯವಸ್ಥೆ ಕಲ್ಪಿಸಲಾಗುವುದು. ಕಂದಾಯ ತಿದ್ದುಪಡಿಯಿಂದ ಕೃಷಿಕರಿಗೆ ಹೆಚ್ಚಿನ ರೀತಿಯಲ್ಲಿ ಸಹಕಾರಿಯಾಗಿದೆ. ಕೃಷಿಭರಿತ ಭೂಮಿಯನ್ನು ಕೃಷಿಗೆ ಮಾತ್ರ ಉಪಯೋಗಿಸಲು ಹಾಗೂ ಒಣಭೂಮಿಯನ್ನು ಇತರ ಉದ್ಯಮ, ಉದ್ಯೋಗಕ್ಕಾಗಿ ಬಳಸಲು ಅನುಕೂಲವಾಗಲಿದೆ. ರೈತರ ಹಿತ ರಕ್ಷಣೆ ಬಯಸುವವರು ಎಪಿಎಂಸಿ ತಿದ್ದುಪಡಿ ಕಾಯಿದೆಯನ್ನು ವಿರೋಧಿಸಲಾರರು. ಈ ಕಾಯಿದೆಯ ಮೂಲಕ ಬೆಳೆದ ಬೆಳೆಯನ್ನು ಎಲ್ಲಿಯೂ, ಯಾರಿಗೂ ಬೇಕಾದರೂ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಮದ್ಯವರ್ತಿಗಳಿಗೆ ಇದರಿಂದ ತೊಂದರೆಯಾಗಿದೆ ಎಂದು ಹೇಳಿದರು.
ಕಾರ್ಕಳ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಬಿ.ಜಗದೀಶ್ ಅಧ್ಯಕ್ಷತೆ ವಹಿಸಿದರು. ತಹಶೀಲ್ದಾರ್ ಪುರಂದರ ಹೆಗ್ಡೆ, ಟಿಎಂಎ ಪೈ ಕಾರ್ಕಳ ಆಸ್ಪತ್ರೆಯ ಮುಖ್ಯಸ್ಥ ಡಾ. ಕೀರ್ತಿನಾಥ ಬಲ್ಲಾಳ್, ಕೆಎಂಸಿ ಆಸ್ಪತ್ರೆಯ ಮಾಡುಕಟ್ಟೆ ವಿಭಾಗದ ಮುಖ್ಯಸ್ಥ ಸಚಿನ್ ಕಾರಂತ್, ಮಾರುಕಟ್ಟೆ ವಿಭಾಗದ ಅಧಿಕಾರಿಗಳಾದ ಮೋಹನ್ ಶೆಟ್ಟಿ, ನಟೇಶ್, ಶ್ರೀನಿವಾಸ, ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಗಣೇಶ್ ನಾಯಕ್, ಕೋಶಾಧಿಕಾರಿ ವಿಲಾಸ್ ಕುಮಾರ್ ನಿಟ್ಟೆ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಮಹಮ್ಮದ್ ಶರೀಫ್ ಸ್ವಾಗತಿಸಿ ನಿರೂಪಿಸಿದರು.