ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಯು.ಆರ್. ಸಭಾಪತಿ ಅವರು ಕಳೆದ ವರ್ಷ ಫೆಬ್ರವರಿಯಲ್ಲಿ ನನ್ನಿಂದ ಮೂರು ಲಕ್ಷ ರೂ. ಪಡೆದಿದ್ದರು. ಆದರೆ ಇದೀಗ ಅದನ್ನು ಮರುಪಾವತಿ ಮಾಡದೆ ವಂಚಿಸುತ್ತಿದ್ದಾರೆ ಎಂದು ಮಂಡ್ಯ ಜಿಲ್ಲೆಯ ಮೊಳೆ ಕೊಪ್ಪಲು ನಿವಾಸಿ ಕಾಂಗ್ರೆಸ್ ಕಾರ್ಯಕರ್ತ ಚಿಕ್ಕಮಂಚಯ್ಯ ಆರೋಪಿಸಿದ್ದಾರೆ.
ಇಂದು ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭಾಪತಿ ತನ್ನ ಮನೆಗೆ ಆಗಮಿಸಿ, ‘ನನ್ನ ಮೇಲೆ ಚೆಕ್ ಬೌನ್ಸ್ ಕೇಸ್ ದಾಖಲಾಗಿದೆ. ಜೈಲಿಗೆ ಹೋಗುವ ಪರಿಸ್ಥಿತಿ ಬಂದಿದೆ. ಮೂರು ಲಕ್ಷಕೊಟ್ಟು ನನ್ನ ಮರ್ಯಾದೆ ಉಳಿಸಿ ಎಂದು ಮನವಿ ಮಾಡಿದ್ದರು. ನಾನು ಅವರ ಮಾತು ನಂಬಿ, ಬೇರೆಯವರಿಂದ ಬಡ್ಡಿಗೆ ಹಣ ತಂದು ಕೊಟ್ಟಿದ್ದೆ. ಆದರೆ ಇದೀಗ ಅವರು ಹಣ ಕೊಡದೆ ಮೋಸ ಮಾಡಿದ್ದಾರೆ ಎಂದು ದೂರಿದರು.
15 ದಿನಗಳಲ್ಲಿ ಹಿಂತಿರುಗಿಸುವ ಭರವಸೆ ಕೊಟ್ಟಿದ್ದ ಸಭಾಪತಿ, ಎರಡ್ಮೂರು ತಿಂಗಳು ಕಳೆದರೂ ಹಣ ವಾಪಸ್ ಕೊಟ್ಟಿಲ್ಲ. ವರ್ಷಗಳ ಹಿಂದೆ ಕೊಟ್ಟಿದ್ದ ಚೆಕ್ ಕೂಡ ಬೌನ್ಸ್ ಆಗಿದೆ. ದೂರು ನೀಡಲು ಮುಂದಾದಾಗ ಮನವೊಲಿಸಿ ಹಣ ಕೊಡುವುದಾಗಿ ನಂಬಿಸಿದ್ದರು. ಆದರೆ ಹಣ ಕೊಡದೆ ಮತ್ತೆ ವಂಚಿಸಿದರು ಎಂದು ಆರೋಪಿದರು.
ವರಿಷ್ಠ ಕಾಂಗ್ರೆಸ್ ನಾಯಕರ ಬಳಿ ದೂರು ನೀಡಿದಾಗ 4 ನಾಲ್ಕು ತಿಂಗಳ ಹಿಂದೆ 50 ಸಾವಿರ ಪಾವತಿಸಿದ್ದರು. ಉಳಿದ ಹಣಕ್ಕಾಗಿ ಕಳೆದ ನಾಲ್ಕು ತಿಂಗಳಿನಿಂದ ಸಭಾಪತಿಯವರನ್ನು ಹುಡುಕುತ್ತಿದ್ದೇನೆ. ಅವರು ಸಂಪರ್ಕಕ್ಕೂ ಸಿಗುತ್ತಿಲ್ಲ, ಕರೆಯನ್ನೂ ಸ್ವೀಕರಿಸುತ್ತಿಲ್ಲ ಎಂದು ದೂರಿದರು.