ಕುದುರೆಮುಖ ಅರಣ್ಯ ಪ್ರದೇಶದಲ್ಲಿ ಅಕ್ರಮ ಮರ ಸಾಗಾಟ ಜಾಲ: ಅರಣ್ಯಾಧಿಕಾರಿಗಳ ದಿಢೀರ್ ದಾಳಿ

ಬೆಳ್ತಂಗಡಿ: ಅಕ್ರಮವಾಗಿ ಮರ ಕಡಿದು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರಕಿದ ಹಿನ್ನೆಲೆ ಪುತ್ತೂರಿನ ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳದ ತಂಡವು ದಾಳಿ ನಡೆಸಿ 1.50 ಲಕ್ಷ ರೂ. ಮೌಲ್ಯದ ಮರ ದಿಮ್ಮಿಗಳನ್ನು ವಶಪಡಿಸಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ವಳಂಬ್ರ ಸಮೀಪ ಕುದುರೆಮುಖ ವನ್ಯಜೀವಿ ವಲಯದ ಅರಣ್ಯ ಪ್ರದೇಶದಲ್ಲಿ ಸೋಮವಾರ ನಡೆದಿದೆ.

ಅರಣ್ಯಾಧಿಕಾರಿಗಳು ದಾಳಿ ನಡೆಸುವ ಮುನ್ಸೂಚನೆ ಸಿಕ್ಕಿದ ಹಿನ್ನೆಲೆಯಲ್ಲಿ ಕಾಡುಗಳ್ಳರು ಮರದ ದಿಮ್ಮಿಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ. ದುಷ್ಕರ್ಮಿಗಳು ಮರ ಕಡಿದು ತುಂಡು ಮಾಡಿಟ್ಟಿದ್ದ ಬೇಂಗ ಜಾತಿಯ ಮರದ ದಿಮ್ಮಿಗಳು ಸ್ಥಳದಲ್ಲಿ ಪತ್ತೆಯಾಗಿವೆ.

ಪುತ್ತೂರು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳದ ಉಪನಿರೀಕ್ಷಕ ಜಯ.ಕೆ. ಹಾಗೂ ಸಿಬ್ಬಂದಿ ಸುಂದರ್ ಶೆಟ್ಟಿ, ವಿಜಯ, ಉದಯ್, ರಾಧಾಕೃಷ್ಣ. ಜಿ.ಬಿ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.