ಸುವರ್ಣ ತ್ರಿಭುಜ ಬೋಟ್ ನಾಪತ್ತೆ ಪ್ರಕರಣ: ಅಂಬಲಪಾಡಿ ದೇವಿಯ ಅಭಯ, ಮೂರು ವಾರದೊಳಗೆ ಮೀನುಗಾರರ ಸುಳಿವು.!

ಉಡುಪಿ: ಮಲ್ಪೆ ಬಂದರಿನಿಂದ ಮೀನುಗಾರಿಕೆ ತೆರಳಿ ಕಣ್ಮರೆಯಾಗಿರುವ ಏಳು ಮೀನುಗಾರರು ಸುರಕ್ಷಿತವಾಗಿದ್ದು, ಅವರ ಬಗ್ಗೆ ಮೂರು ವಾರದೊಳಗೆ ಸುಳಿವು ಕೊಡುತ್ತೇನೆ. ನೀವು ಆತಂಕ ಪಡುವ ಅಗತ್ಯವಿಲ್ಲ ಎಂದು ಅಂಬಲಪಾಡಿ ದೇಗುಲದ ದೇವಿ ಅಮ್ಮನವರು ಮೀನುಗಾರರ ಕುಟುಂಬದವರಿಗೆ ಅಭಯ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಸಹಿತ ಏಳು ಮಂದಿ ಮೀನುಗಾರರು ನಾಪತ್ತೆಯಾಗಿ 46 ದಿನಗಳು ಕಳೆದಿವೆ. ಆದರೆ ಈವರೆಗೂ ಮೀನುಗಾರರ ಯಾವುದೇ ಸುಳಿವು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಮೀನುಗಾರರ ಕುಟುಂಬದವರು ಇಂದು ಅಂಬಲಪಾಡಿಯ ಲಕ್ಷ್ಮೀಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ದೇವರಿಗೆ ಸಾಮೂಹಿಕವಾಗಿ ವಿಶೇಷ ಪೂಜೆ ಸಲ್ಲಿಸಿ, ಮೀನುಗಾರರು ಆದಷ್ಟು ಬೇಗ ಸುರಕ್ಷಿತವಾಗಿ ಮನೆಗೆ ಮರಳಿಬರಲೆಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ದೇವಿ ಅಮ್ಮನವರು ಮೀನುಗಾರರ ಕುಟುಂಬಕ್ಕೆ ಅಭಯ ನೀಡಿದ್ದಾರೆ. ಮೀನುಗಾರರು ಒಂದು ಕಡೆಯಲ್ಲಿ ಸುರಕ್ಷಿತವಾಗಿದ್ದಾರೆ. ಅವರಿಗೆ ಯಾವುದೇ ಅಪಾಯ ಆಗಿಲ್ಲ. ಮೂರು ವಾರದೊಳಗೆ ಅವರ ಸುಳಿವು ನೀಡುತ್ತೇನೆ. ನೀವು ಯಾವುದೇ ಆತಂಕ ಪಡುವ ಅಗತ್ಯ ಇಲ್ಲ ಎಂದು ದೇವರು ಕುಟುಂಬದವರಿಗೆ ಅಭಯ ನೀಡಿದ್ದಾರೆ ಎನ್ನಲಾಗಿದೆ.
ತನಿಖೆ ಮುಂದುವರಿಕೆ:
ನಾಪತ್ತೆಯಾಗಿರುವ ಮೀನುಗಾರರಿಗಾಗಿ ತನಿಖಾ ತಂಡಗಳು ಶೋಧ ಕಾರ್ಯ ಮುಂದುವರಿಸಿದೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ನೌಕಾಪಡೆಯ ಸಿಬ್ಬಂದಿ ಸಮುದ್ರದ ತಳಭಾಗದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ನೌಕಾಪಡೆಯ ಮುಳುಗು ತಜ್ಞರು ಸಮುದ್ರದ ತಳದಲ್ಲಿ ಶೋಧ ಕಾರ್ಯಾಚರಣೆ ಮಾಡುತ್ತಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ. ಆದರೆ ಇದುವರೆಗೂ ಬೋಟ್ ಹಾಗೂ ಮೀನುಗಾರರ ಯಾವುದೇ ಸುಳಿವು ಪತ್ತೆಯಾಗಿಲ್ಲ.