ಒಮ್ಮೆ ನನ್ನ ಅಜ್ಜಿ ಕುಸುಮಕ್ಕನ ಆರೋಗ್ಯ ಹದಗೆಟ್ಟಿತ್ತು. ಹೀಗಾಗಿ ಮಠದಲ್ಲೇ ಉಳಿದೆವು. ರಾತ್ರಿ ಸುಮಾರು 1 ಗಂಟೆಯ ಹೊತ್ತಿಗೆ ಯಾರೋ ಮಠದವರೊಬ್ಬರು ಬೊಬ್ಬಿಡುತ್ತಾ ಬಂದು ನಮ್ಮ ಕೋಣೆಯ ಬಾಗಿಲನ್ನು ಜೋರಾಗಿ ತಟ್ಟಿದರು. ಕೃಷ್ಣಮಠದ ಪಾಯದ ಕೋಣೆಗೆ ಬೆಂಕಿ ಹತ್ತಿಕೊಂಡಿದೆ ಎಲ್ಲಾ ಬನ್ನಿ ಎಂದು ಕೂಗುತ್ತಾ ಮಠದ ಸಿಬ್ಬಂದಿ ಎಲ್ಲರಿಗೂ ವಿಷಯ ತಿಳಿಸುತ್ತಿದ್ದ. ತಕ್ಷಣ ನನ್ನ ಅಪ್ಪ ಲಾತವ್ಯಾಚಾರ್ ಮಠದ ಕಡೆಗೆ ಓಡಿದರು. ನಾವೂ ಕೂಡಾ ಅಮ್ಮನ ಜೊತೆ ಆ ಸ್ಥಳಕ್ಕೆ ಹೋದೆವು.
ಆದರೆ ನಾವು ಬರುವಷ್ಟರಲ್ಲಿ ಶಿರೂರು ಶ್ರೀಪಾದರು ಬೆಂಕಿ ಹತ್ತಿಕೊಂಡಿದ್ದ ಪಾಯದ ಕೋಣೆಯ (ಶ್ರೀದೇವರಿಗೆ ಪಂಚಾಮೃತ ಸಾಹಿತ್ಯವನ್ನು ಸಂಗ್ರಹಿಸಿಡುವ ಕೋಣೆ) ಅಟ್ಟಕ್ಕೆ ಏಕಾಂಗಿಯಾಗಿ ಹತ್ತಿಯಾಗಿತ್ತು. ಅಲ್ಲದೆ ಚೌಕಿಯಲ್ಲಿದ್ದ ನೀರಿನ ಮಿನಿ ಪಂಪಿನ ಮೂಲಕ ನೀರನ್ನು ಸುಮಾರು ಮೂರು ಗಂಟೆಗಳ ಕಾಲ ಮಠದ ಕೆಲ ಸಿಬ್ಬಂದಿಗಳ ಜೊತೆ ಸೇರಿ ಜೋರಾಗಿ ಸಿಂಪಡಿಸುತ್ತಾ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಅಗ್ನಿಶಾಮಕ ದಳದವರು ಆಗಮಿಸುವಾಗ ಬಹುತೇಕ ಕೆಲಸಗಳೆಲ್ಲಾ ಮುಗಿದಾಗಿತ್ತು.
ಬೆಂಕಿ ಸಂಪೂರ್ಣ ಆರಿದ ನಂತರ ಶ್ರೀಪಾದರು ಪಾಯದ ಮನೆಯ ಅಟ್ಟದಿಂದ ಜೈಶ್ರೀರಾಮ್ ಎಂದು ಹೇಳುತ್ತಾ ಕೆಳಗೆ ಜಿಗಿಯುತ್ತಿದ್ದಂತೆ ಸೇರಿದ್ದ ಜನ ಸಮೂಹ ಭಾರಿ ಕರತಾಡನದೊಂದಿಗೆ ಶ್ರೀಪಾದರನ್ನು ಸ್ವಾಗತಿಸಿದರು. ಕಪ್ಪು ಮಸಿಯಲ್ಲಿ ಮಿಂದಿದ್ದ ಶ್ರೀಪಾದರನ್ನು ಕಂಡು ನನಗೆ ಎಲ್ಲಿಲ್ಲದ ನಗು ಬಂದಿತು. ನನ್ನ ಬಳಿ ಬಂದವರೇ ನನ್ನ ಮುಸಿ ನಗುವನ್ನು ಕಂಡು ಅವರ ಮುಖದ ಮಸಿಯನ್ನು ನನ್ನ ಮುಖಕ್ಕೂ ಹಚ್ಚಿ ಸೀದಾ ಮಧ್ವಸರೋವರಕ್ಕೆ ಹೋಗಿ ಮಿಂದು ನೇರವಾಗಿ ಕೃಷ್ಣಪೂಜೆಗೆ ತೆರಳಿದರು.
♦ ಅಕ್ಷೋಭ್ಯ ಆಚಾರ್ಯ, ಉಡುಪಿ