ಬೆಳಗಾವಿ: ಕೊರೊನಾ ಸೋಂಕಿನಿಂದ ನವದೆಹಲಿಯ ಏಮ್ಸ್ ಅಸ್ಪತ್ರೆಯಲ್ಲಿ ನಿನ್ನೆ ನಿಧನರಾದ ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಅಂತ್ಯಕ್ರಿಯೆ ದೆಹಲಿಯಲ್ಲೇ ನಡೆಯಲಿದೆ.
ಪಾರ್ಥಿವ ಶರೀರವನ್ನು ಬೆಳಗಾವಿಗೆ ತರಬೇಕು. ಇಲ್ಲೇ ಅಂತ್ಯಕ್ರಿಯೆ ನಡೆಸಬೇಕು ಎಂದು ಕುಟುಂಬದವರು ಹಾಗೂ ಅಭಿಮಾನಿಗಳ ಬಯಕೆಯಾಗಿತ್ತು. ಈ ನಿಟ್ಟಿನಲ್ಲಿ ಅಂಗಡಿ ಅವರ ಬೀಗರೂ ಆಗಿರುವ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಪ್ರಯತ್ನ ಆರಂಭಿಸಿದ್ದರು.
ರಾಜ್ಯ ಸರ್ಕಾರದಿಂದಲೂ ಪ್ರಕ್ರಿಯೆ ನಡೆಸಲಾಗಿತ್ತು. ಆದರೆ, ಕೋವಿಡ್ ನಿಯಮಾವಳಿ ಪ್ರಕಾರ ಪಾರ್ಥಿವ ಶರೀರವನ್ನು ಬೆಳಗಾವಿಗೆ ತರಲು ಅವಕಾಶ ಆಗುತ್ತಿಲ್ಲ ಎಂದು ತಿಳಿದುಬಂದಿದೆ.
ದೆಹಲಿಯಲ್ಲಿ ಇಂದು ಸಂಜೆ 4 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂಗಡಿಯವರ ಅಂತಿಮ ಸಂಸ್ಕಾರದ ಪ್ರಕ್ರಿಯೆ ನೆರವೇರಲಿದೆ. ಮರಣೋತ್ತರ ಪರೀಕ್ಷೆಯ ನಂತರವೂ ಕೋವಿಡ್ ಪಾಸಿಟಿವ್ ಬಂದಿದೆ. ಆದ್ದರಿಂದ ದೆಹಲಿಯಲ್ಲೇ ಅಂತ್ಯಕ್ರಿಯೆ ನಡೆಸಲು ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿದುಬಂದಿದೆ.