ಉಡುಪಿ: ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಏಕಾಏಕಿಯಾಗಿ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೈಗಾರಿಕಾ ವಲಯ ಭೂ ಪರಿವರ್ತನೆಗೆ ನೀಡಿದ ಆದೇಶಕ್ಕೆ ಹೈಕೋರ್ಟ್ ಶಾಶ್ವತ ತಡೆಯಾಜ್ಞೆ ನೀಡಿದೆ. ಇದು ಉದ್ಯಾವರ ಗ್ರಾಮಸ್ಥರ ಪರಿಸರ ಉಳಿಸುವ ಹೋರಾಟಕ್ಕೆ ಹಾಗೂ ಉದ್ಯಾವರ ಗ್ರಾಮ ಪಂಚಾಯತ್ ಗೆ ಸಿಕ್ಕಿದ ಜಯ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.
ಇಂದು ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೈಗಾರಿಕಾ ವಲಯ ಸ್ಥಾಪನೆಗೆ ಅವಕಾಶ ಕೊಡಬಾರದೆಂದು ಉದ್ಯಾವರ ಗ್ರಾಮ ಪಂಚಾಯತ್ ನಲ್ಲಿ ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಗ್ರಾಮದ ಜನರ ಭಾವನೆಗೆ ವಿರುದ್ಧವಾಗಿ ಜಿಪಂ ಅಧ್ಯಕ್ಷರು ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದ್ದರು. ಈಗ ಅಧ್ಯಕ್ಷರು ತೆಗೆದುಕೊಂಡ ಆದೇಶಕ್ಕೆ ಹೈಕೋರ್ಟ್ ಶಾಶ್ವತ ತಡೆಯಾಜ್ಞೆ ನೀಡಿದೆ ಎಂದರು.
ಉದ್ಯಾವರ ಜನನಿಬಿಡ ಪ್ರದೇಶವಾಗಿದ್ದು, 12 ಸಾವಿರಕ್ಕೂ ಹೆಚ್ಚಿನ ಜನ ವಾಸಿಸುತ್ತಿದ್ದಾರೆ. ಈಗಾಗಲೇ ಎರಡು ಫಿಶ್ ಮಿಲ್ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಜನಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಇಲ್ಲಿನ ಪರಿಸರ ಸಂಪೂರ್ಣ ಕಲುಷಿತಗೊಂಡಿದೆ. ಈ ನಡುವೆ ಇದೇ ಗ್ರಾಮವನ್ನು ಪ್ರತಿನಿಧಿಸುವ ಜಿಪಂ ಅಧ್ಯಕ್ಷರು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದರು. ಗ್ರಾಮದ ಜನರ ಭಾವನೆಗೆ ವಿರುದ್ಧವಾಗಿ ಹೋಗಬೇಕಾದರೆ ಏನಾದ್ರೂ ಷಡ್ಯಂತ್ರ ಇರಬಹುದು ಎಂದು ದೂರಿದರು.
ಇದೀಗ ಜನರ ಭಾವನೆಗೆ ಅನುಗುಣವಾಗಿ ಹೈಕೋರ್ಟ್ ಆದೇಶ ನೀಡಿದೆ. ಅಲ್ಲದೆ ಈಗಾಗಲೇ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಎರಡು ಫಿಶ್ ಮಿಲ್ ಹಾಗೂ ಸ್ಥಗಿತಗೊಂಡಿರುವ ಒಂದು ಫಿಶ್ ಮಿಲ್ ವಿರುದ್ಧ ಕೋರ್ಟ್ ನಲ್ಲಿ ಕೇಸ್ ದಾಖಲಿಸಲಾಗಿದ್ದು, ಅದು ವಿಚಾರಣೆ ಹಂತದಲ್ಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸುಗಂಧಿ ಶೇಖರ್, ಉದ್ಯಾವರ ಗ್ರಾಮದ ಪರಿಸರ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಆನಂದ್, ಗ್ರಾಪಂ ಸದಸ್ಯ ಲಾರೆನ್ಸ್ ಡೇಸಾ, ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಗಿರೀಶ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿವಾಕರ್ ಇದ್ದರು.