ಬೆಂಗಳೂರು: ತೋಟಗಾರಿಕೆ ಸಚಿವ ಕೆ.ಸಿ. ನಾರಾಯಣ ಗೌಡ ಮತ್ತು ಕಡೂರು ಶಾಸಕ ಬೆಳ್ಳಿಪ್ರಕಾಶ್ ನಡುವೆ ಇಂದು ವಿಧಾನಸಭೆಯ ಕ್ಯಾಂಟೀನ್ ನಲ್ಲಿ ಘರ್ಷಣೆ ಉಂಟಾಗಿದ್ದು, ಇಬ್ಬರು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು ಎನ್ನಲಾಗಿದೆ.
ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿದ್ದು, ಅದು ಹೊಡೆದಾಡಿಕೊಳ್ಳುವ ಹಂತಕ್ಕೆ ತಲುಪಿತ್ತು ಎಂದು ತಿಳಿದುಬಂದಿದೆ.
ಕ್ಯಾಂಟೀನ್ ಇಬ್ಬರು ಮುಖಾಮುಖಿಯಾಗಿದ್ದು, ಈ ವೇಳೆ ಶಾಸಕ ಬೆಳ್ಳಿ ಪ್ರಕಾಶ್ ವರ್ಗಾವಣೆ ವಿಚಾರಣೆ ಪ್ರಶ್ನಿಸಿದರು. ಆಗ ಸಚಿವ ನಾರಾಯಣ ಗೌಡ ಆಯ್ತು ಮುಂದಿನ ವಾರ ಮಾಡಿಕೊಡುತ್ತೇನೆ ಎಂದಿದ್ದಾರೆ. ಆಗ ಮುಂದಿನ ವಾರ ಹೇಳಿ ನಾಲ್ಕೈದು ತಿಂಗಳಾಯಿತು. ನಮ್ಮಂತಹ ನಾಲಾಯಕ್ ಶಾಸಕರು ಯಾರು ಇಲ್ಲ ಎಂದಿದ್ದಾರೆ ಎನ್ನಲಾಗಿದೆ.
ಇದಕ್ಕೆ ಸಿಟ್ಟಿಗೆದ್ದ ಸಚಿವ, ನಾಲಿಗೆ ಬೀಗಿಹಿಡಿದು ಮಾತನಾಡು. ಮಾಸ್ಕ್ ಹಾಕಿಕೊಂಡು ಮಾತನಾಡು ಎಂದು ಹೇಳಿದ್ದಾರೆ. ಬಳಿಕ ಇಬ್ಬರು ಕೂಡ ಏಕವಚನದಲ್ಲಿಯೇ ಬೈದಾಡಿಕೊಂಡಿದ್ದಾರೆ. ಪರಿಸ್ಥಿತಿ ಬಿಗಡಾಯಿಸಿ ಕೈ ಕೈ ಮಿಲಾಯಿಸಲು ಮುಂದಾದರು. ಜೆಡಿಎಸ್ ಶಾಸಕ ಅನ್ನದಾನಿ ಸೇರಿದಂತೆ ಹಲವರು ಮಧ್ಯಪ್ರವೇಶಿಸಿ ಜಗಳ ಬಿಡಿಸಿದರು.