ಉಡುಪಿ: ವಿಶ್ವಕರ್ಮ ಸಮುದಾಯಕ್ಕೆ ಬಿಜೆಪಿ ಸರ್ಕಾರದಿಂದ ನಿರೀಕ್ಷಿತ ಅನುಕೂಲ ಸಿಕ್ಕಿಲ್ಲ. ಕೊರೊನಾದಿಂದ ಸಂಕಷ್ಟಕ್ಕೀಡಾಗಿರುವ ವಿಶ್ವಕರ್ಮ ಸಮುದಾಯಕ್ಕೆ ವಿಶೇಷ ಆರ್ಥಿಕ ಘೋಷಿಸಿಲ್ಲ, ಸಾಲಮನ್ನಾ ಮಾಡುವ ವಿಚಾರದಲ್ಲೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಉಡುಪಿ ಜಿಲ್ಲಾ ಮುಖಂಡ ನೇರಂಬಳ್ಳಿ ರಮೇಶ್ ಆಚಾರ್ಯ ಬೇಸರ ವ್ಯಕ್ತಪಡಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಹಿಂದುಳಿದ ವರ್ಗಗಳ ಪೈಕಿ ವಿಶ್ವಕರ್ಮ ಸಮುದಾಯದ ರಾಜ್ಯಾಧ್ಯಕ್ಷ ಕೆ.ಪಿ ನಂಜುಂಡಿ ಅವರಿಗೆ ವಿಶೇಷ ಸ್ಥಾನಮಾನ ಕೊಟ್ಟು ಎಲ್ಲಾ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ನಾಯಕರನ್ನಾಗಿ ಮಾಡುತ್ತೇನೆ. ವಿಶ್ವಕರ್ಮ ಸಮುದಾಯಕ್ಕೆ ಸಾವಿರ ಕೋಟಿ ವಿಶೇಷ ಅನುದಾನ ನೀಡುತ್ತೇನೆ. ವಿಶ್ವಕರ್ಮ ಸಮುದಾಯದ ಜೊತೆಗೆ ಇತರ ಹಿಂದುಳಿದ ವರ್ಗಗಳ ಸಮುದಾಯಗಳ ಅಭಿವೃದ್ಧಿಯ ಜವಾಬ್ದಾರಿ ನಂಜುಂಡಿ ಕೊಡುತ್ತೇನೆಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಭರವಸೆ ಕೊಟ್ಟಿದ್ದರು. ಆದರೆ ಮುಖ್ಯಮಂತ್ರಿ ಹಾಗೂ ಪಕ್ಷ ನುಡಿದಂತೆ ನಡೆಯಲಿಲ್ಲ. ಕೇವಲ ವಿಧಾನ ಪರಿಷತ್ ಸದಸ್ಯರ ಗೌರವ ಸ್ಥಾನ ನೀಡಿದ್ದಾರೆ. ಅಧಿಕಾರ ನೀಡದೇ ಗೌರವ ನೀಡಿದರೆ ವಿಶ್ವಕರ್ಮ ಸಮುದಾಯದ ಅಭಿವೃದ್ಧಿ ಹೇಗೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ನಮ್ಮ ಕುಲಕಸುಬುಗಳನ್ನು ಉಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿ ಕೌಶಲ್ಯಗಳಿರುವ ಯುವಕರಿಗೆ ಉದ್ಯೋಗ ನೀಡಿ, ಧರ್ಮ, ರಾಜಕೀಯದ ಕೆಲಸಗಳಿಗೆ ಯುವಕರನ್ನು ಬಳಸಿಕೊಂಡು ಕೈಬಿಡಬೇಡಿ ಎಂದರು.
ವಿಶ್ವಕರ್ಮ ಸಮುದಾಯದ ರಾಜ್ಯಾಧ್ಯಕ್ಷ ಕೆ.ಪಿ ನಂಜುಂಡಿಯವರು ರಾಜ್ಯದ 224 ವಿಧಾನ ಸಭಾ ಕ್ಷೇತ್ರದಲ್ಲಿ ಸಂಚಾರ ಮಾಡಿ ಸರ್ಕಾರದಿಂದ ಆಗಿರುವ ಅನ್ಯಾಯದ ಬಗ್ಗೆ ವಿಶ್ವಕರ್ಮ ಸಮಾಜದ ಮಂದಿಗೆ ಮನವರಿಕೆ ಮಾಡಿಕೊಡುವ ಜೊತೆಗೆ ಸಮಾಜದ ಸಂಘಟನೆಯನ್ನು ಇನ್ನಷ್ಟು ಪ್ರಬಲಬಾಗಿ ಮಾಡಲಿದ್ದಾರೆ. ಮುಂದಿನ ದಿನಗಳಲ್ಲಿ ಯಶಸ್ವಿ ಸಂಘಟನೆ ಆದ ಬಳಿಕ ಸುಮಾರು 4 ರಿಂದ 5 ಲಕ್ಷ ಜನ ಸೇರಿಸಿ ಬೃಹತ್ ಸಮಾವೇಶ ಮಾಡುತ್ತೇವೆ. ಸರ್ಕಾರಕ್ಕೆ ನಾವು ಕೇಳುವುದು ಇಷ್ಟೇ ಗೌರವದ ಸ್ಥಾನಮಾನ ಸಾಕು ನಮಗೆ ಅಧಿಕಾರದ ಶಕ್ತಿ ನೀಡಿ ಎಂದು ಆಗ್ರಹಿಸಿದರು.
ಉಡುಪಿ ಜಿಲ್ಲಾ ವಿಶ್ವಕರ್ಮ ಮಹಾಸಭಾದ ಯುವ ಸಂಘಟನೆಯ ಮುಖಂಡ ರಾಮಕೃಷ್ಣ ಆಚಾರ್ಯ ಕೋಟ ಮಾತನಾಡಿ, ಮೊದಲ ಹಂತವಾಗಿ ಉಸ್ತುವಾರಿಗಳ ಮೂಲಕ ಸಂಘಟನೆಯ ಚಟುವಟಿಕೆ ಆರಂಭಸಿದ್ದೇವೆ. ವಿಶ್ವಕರ್ಮ ಮಹಾಸಭಾದ ರಾಜ್ಯ ಯುವ ಘಟಕದ ಅಧ್ಯಕ್ಷ ಶ್ರೀನಿವಾಸ ಆಚಾರ್ಯ ಮಳವಳ್ಳಿ ಅವರ ನೇತೃತ್ವದಲ್ಲಿ ಉಡುಪಿ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮದಲ್ಲಿ ಯುವ ಮತ್ತು ಮಹಿಳಾ ಘಟಕಗಳ ರಚನೆಗಾಗಿ ಸಮಾಲೋಚನೆ ಮಾಡುತ್ತಿದ್ದಾರೆ. ವಿಶ್ವಕರ್ಮ ಯುವಕರು ಸೇರಿ ಎಲ್ಲರಿಗೂ ಸ್ಥಾನಮಾನ ನೀಡುವ ಮೂಲಕ ಸಂಘಟನೆಗೆ ಒತ್ತು ನೀಡುತ್ತೇವೆ. ನಿರ್ಲಕ್ಷಿತವಾದ ನಮ್ಮ ಸಮಾಜಕ್ಕೆ ರಾಜಕೀಯ ಶಕ್ತಿ ಬೇಕು. ಅಷ್ಟೇ ಅಲ್ಲದೇ ಅಧಿಕಾರದ ಶಕ್ತಿಯೂ ಬೇಕು. ಆ ನಿಟ್ಟಿನಲ್ಲಿ ನಾವು ರಾಜ್ಯ ಸಂಘಟನೆ ಜೊತೆಗೆ ಜಿಲ್ಲೆ ಸಂಘಟನೆಯವರು ಕೈ ಜೋಡಿಸಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಮುಖಂಡ ಎಚ್. ರಮೇಶ್ ಆಚಾರ್ಯ ಹೆಬ್ರಿ, ಗಂಗಾಧರ ಆಚಾರ್ಯ ಬಾರ್ಕೂರು, ರಾಜೇಶ್ ಆಚಾರ್ಯ ಬೈಂದೂರು, ಎಚ್. ಸುಶಾಂತ್ ಆಚಾರ್ಯ ಬೈಂದೂರು ಇದ್ದರು.