ಉಡುಪಿ: ಕೇಂದ್ರ ಹಾಗೂ ರಾಜ್ಯ ಸರಕಾರಗಳ ವೈಫಲ್ಯಗಳ ವಿರೋಧಿಸಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಮತ್ತು ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಗಳ ಜಂಟಿ ಆಶ್ರಯದಲ್ಲಿ ಶನಿವಾರ ಬ್ರಹ್ಮಗಿರಿಯ ಕಾಂಗ್ರೆಸ್ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಂಗಳೂರು ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಪ್ರತಿಭಾ ಕುಳಾಯಿ ಮಾತನಾಡಿ, ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಗರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಬಿಜೆಪಿ ಪಕ್ಷವೇ ಸುಳ್ಳು ಮಾತನಾಡುವ ಕಾರ್ಖಾನೆಯಾಗಿ ಮಾರ್ಪಟ್ಟಿದೆ. ಕೊಟ್ಟ ಭರವಸೆಯನ್ನು ಈಡೇರಿಸದೆ ಜನರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯುವಕರಿಗೆ ಉದ್ಯೋಗ ಇಲ್ಲದೆ ದೇಶದ ಜಿಡಿಪಿ ಕುಸಿತ ಆಗುತ್ತಿದೆ. ಕೊರೋನದ ಹೆಸರಿನಲ್ಲಿ ಬಿಜೆಪಿಯವರು ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ಜನರ ಭಾವನೆ ಯನ್ನು ಕೆರಳಿಸಿ ರಾಜಕೀಯ ಬೇಳೆ ಬೇಯಿಸುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಕಾರ್ಯದರ್ಶಿ ವರೋನಿಕಾ ಕರ್ನೆಲಿಯೋ ಮಾತನಾಡಿ, ಆಶ್ರಯ ಮನೆ ಸ್ಥಗಿತ, ಗ್ಯಾಸ್ ಸಬ್ಸಿಡಿ ಕಡಿತ, ಪಿಂಚಣಿ ವಿಳಂಬ, ಕೋವಿಡ್ ನಿಯಂತ್ರಿ ಸುವಲ್ಲಿ ವಿಫಲ ಹೀಗೆ ಸರಕಾರದ ಹಲವು ವೈಫಲ್ಯಗಳಿಂದ ಮಹಿಳೆಯರ ಮೇಲೆ ನೇರ ಪರಿಣಾಮ ಬೀರುತ್ತಿವೆ. ಈ ಸರಕಾರ ಮಹಿಳಾ, ಕಾರ್ಮಿಕ, ರೈತ ವಿರೋಧಿ ಆಗಿದೆ ಎಂದು ಆರೋಪಿಸಿದರು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾ ವಾಗ್ಳೆ, ಬ್ಲಾಕ್ ಅಧ್ಯಕ್ಷೆ ಚಂದ್ರಿಕಾ ಶೆಟ್ಟಿ, ಮುಖಂಡ ಜ್ಯೋತಿ ಹೆಬ್ಬಾರ್, ಗೋಪಿ ನಾಯ್ಕಾ, ಡಾ.ಸುನೀತಾ ಶೆಟ್ಟಿ, ರೋಶಿನಿ ಒಲಿವೇರಾ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್, ರಮೇಶ್ ಕಾಂಚನ್, ಗಣೇಶ್ ನೆರ್ಗಿ, ಭಾಸ್ಕರ್ ರಾವ್ ಕಿದಿಯೂರು, ಕಿಶನ್ ಹೆಗ್ಡೆ ಕೊಳ್ಕೆಬೈಲು ಮೊದಲಾದವರು ಉಪಸ್ಥಿತರಿದ್ದರು.