ಉಡುಪಿ: ರಾಜ್ಯದಲ್ಲಿ ಅತ್ಯಂತ ಪ್ರಬಲವಾದ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸುವಂತೆ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿ ಜಾರಿಯಲ್ಲಿರುವ ಗೋ ಹತ್ಯೆ ನಿಷೇಧ ಕಾಯಿದೆ (1964) ಅತ್ಯಂತ ದುರ್ಬಲವಾಗಿದೆ. ಆದ್ದರಿಂದ ಪ್ರತಿದಿನ ರಾಜ್ಯದಲ್ಲಿ ಅಕ್ರಮ ಗೋ ಸಾಗಾಟ, ಗೋವುಗಳ ಹತ್ಯೆ ನಡೆಯುತ್ತಿದೆ. ಗೋವುಗಳನ್ನು ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದು, ಇದರಿಂದ ಕೃಷ್ಣನ ಭಕ್ತರಿಗೆ ಅತ್ಯಂತ ದುಃಖವಾಗಿದೆ ಎಂದು ಶ್ರೀಪಾದರ ಹೇಳಿದ್ದಾರೆ.
ಗೋವುಗಳ ರಕ್ಷಣೆ ಹಾಗೂ ಗೋವುಗಳ ವಧೆ ನಿಲ್ಲಬೇಕಾದರೆ ರಾಜ್ಯದಲ್ಲಿ ಅತ್ಯಂತ ಬಲಿಷ್ಠವಾದ ಗೋ ಹತ್ಯೆ ನಿಷೇಧ ಕಾಯ್ದೆ ಅನುಷ್ಠಾನಗೊಳಿಸಬೇಕು. ಇದೇ ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ ವಿಧಾನಸಭೆ ಅಧಿವೇಶನದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಮಂಡಿಸಿ, ಅನುಷ್ಠಾನಗೊಳಿಸಬೇಕು ಎಂದು ಶ್ರೀಪಾದರು ಆಗ್ರಹಿಸಿದ್ದಾರೆ.